ಬೆಂಗಳೂರು: ಬೆಂಗಳೂರು ನಗರವನ್ನು ಜಾಗತಿಕ ನಗರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ 1.5 ಲಕ್ಷ ಕೋಟಿ ರೂಪಾಯಿ ಅನುಧಾನ ನೀಡುವಂತೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.
ನಮ್ಮ ಮೆಟ್ರೋದ ಹಳದಿ ಮಾರ್ಗ ಮತ್ತು ಇತರ ಯೋಜನೆಗಳನ್ನು ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿಗೆ ಡಿಕೆ ಶಿವಕುಮಾರ್ ಪತ್ರವನ್ನು ಸಲ್ಲಿಸಿದರು. ಸಂಚಾರ ದಟ್ಟಣೆ, ನೀರಿನ ಕೊರತೆ ಮತ್ತು ತ್ಯಾಜ್ಯ ನಿರ್ವಹಣೆ ಸೇರಿದಂತೆ ತ್ವರಿತ ನಗರೀಕರಣದಿಂದ ಉಂಟಾಗುವ ತುರ್ತು ಸವಾಲುಗಳನ್ನು ಎತ್ತಿ ತೋರಿಸಿದರು. ಭಾರತದ ತಂತ್ರಜ್ಞಾನ ಕೇಂದ್ರ ಮತ್ತು ಎರಡನೇ ಅತಿದೊಡ್ಡ ತೆರಿಗೆ ವಸೂಲಿ ಆಗುವ ನಗರದ ಪಾತ್ರವನ್ನು ಉಲ್ಲೇಖಿಸಿದರು.
ಪ್ರಸ್ತಾವಿತ ಯೋಜನೆಗಳಲ್ಲಿ ಹಿಂದಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎರಡು ಸುರಂಗ ಮಾರ್ಗ ಯೋಜನೆ ಮತ್ತು ಮೇಲ್ಸೆತುವೆ ಕಾರಿಡಾರ್‌ಗಳು (ರೂ. 41,780 ಕೋಟಿ), ರಸ್ತೆ ಕಾರಿಡಾರ್‌ಗಳು (ರೂ. 15,000 ಕೋಟಿ), ರೂ. 27,000 ಕೋಟಿ ಪೆರಿಫೆರಲ್ ರಿಂಗ್ ರಸ್ತೆ, ನಾಲ್ಕು ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಘಟಕಗಳು (ರೂ. 3,200 ಕೋಟಿ), ಮತ್ತು 128 ಕಿ.ಮೀ. ವ್ಯಾಪ್ತಿಯ ಮೆಟ್ರೋ ವಿಸ್ತರಣೆಗಳು ಸೇರಿವೆ.
ಮುಂಬರುವ ಮೆಟ್ರೋ ವಯಾಡಕ್ಟ್‌ಗಳ ಉದ್ದಕ್ಕೂ ಡಬಲ್ ಡೆಕ್ಕರ್ ಮೇಲ್ಸೆತುವೆ ರಸ್ತೆಗಳು (ರೂ. 28,916 ಕೋಟಿ), ಮಳೆನೀರಿನ ಚರಂಡಿಗಳ ಉದ್ದಕ್ಕೂ 300 ಕಿ.ಮೀ. ರಸ್ತೆಗಳು (ರೂ. 3,000 ಕೋಟಿ), ಮತ್ತು ಕಾವೇರಿ ನೀರು ಸರಬರಾಜು ಯೋಜನೆಯ ಆರನೇ ಹಂತ (ರೂ. 6,939 ಕೋಟಿ) ಗಳಿಗೆ ಡಿಸಿಎಂ ಕೇಂದ್ರದ ಬೆಂಬಲವನ್ನು ಕೋರಿದರು.
ದೆಹಲಿ-ಮೀರತ್ ಜಾಲದ ಮಾದರಿಯಲ್ಲಿ ಬೆಂಗಳೂರಿನ ಸುತ್ತಲಿನ ನಾಲ್ಕು ಕಾರಿಡಾರ್‌ಗಳಿಗೆ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆಯನ್ನು ಸಹ ಶಿವಕುಮಾರ್ ಪ್ರಸ್ತಾಪಿಸಿದರು. 12 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಸುಸ್ಥಿರ ಮೂಲಸೌಕರ್ಯ, ಆರ್ಥಿಕ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟವನ್ನು ಖಚಿತಪಡಿಸಿಕೊಳ್ಳಲು ದೆಹಲಿಗೆ ಸಮಾನವಾಗಿ ಹಣಕಾಸು ಒದಗಿಸುವಂತೆ ಅವರು ಮನವಿ ಮಾಡಿದರು.