ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಆರ್.ವಿ.ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ (ಹಳದಿ ರಸ್ತೆ) ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾನುವಾರ ಹಸಿರು ನಿಶಾನೆ ತೋರಿದ್ದಾರೆ. ಈ ಮಾರ್ಗದಲ್ಲಿ ಸೋಮವಾರದಿಂದ ಸಂಚಾರ ಆರಂಭವಾಗಲಿದೆ. ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಮೋದಿಯವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಸೇರಿದಂತೆ ಕೆಲವು ಬಿಜೆಪಿ ನಾಯಕರೊಂದಿಗೆ ಮೆಟ್ರೋ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ವರೆಗೆ ಸಂಚಾರ ಕೈಗೊಂಡರು. ಮೆಟ್ರೋ ಹಂತ-3 ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದ ಆಪರೇಷನ್ ಸಿಂಧೂರ ಸಮಯದಲ್ಲಿ ಜಗತ್ತು ಮೊದಲ ಬಾರಿಗೆ ಭಾರತದ ಹೊಸ ಮುಖವನ್ನು ನೋಡಿತು ಎಂದು ಹೇಳಿದರು. 'ಆಪರೇಷನ್ ಸಿಂಧೂರ ಯಶಸ್ಸಿನ ಹಿಂದೆ ನಮ್ಮ ತಂತ್ರಜ್ಞಾನ ಮತ್ತು ಮೇಕ್ ಇನ್ ಇಂಡಿಯಾದ ಬಲವಿದೆ. ಆಪರೇಷನ್ ಸಿಂಧೂರದಲ್ಲಿ ಬೆಂಗಳೂರು ಮತ್ತು ನಗರದ ಯುವಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರು ವಿಶ್ವದ ದೊಡ್ಡ ನಗರಗಳೊಂದಿಗೆ ಗುರುತಿಸಲ್ಪಟ್ಟಿದೆ ಎಂದು ಮೋದಿ ಹೇಳಿದರು.
ನಮ್ಮ ಮೆಟ್ರೋದ ಹಳದಿ ಮಾರ್ಗ ರೈಲು ಸಂಚಾರ ಮಾರ್ಗದ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸಮನಾಗಿ ಹಣಕಾಸು ಒದಗಿಸಬೇಕಿದ್ದರೂ, ರಾಜ್ಯವು ಕೇಂದ್ರಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ ಎಂದರು. ಒಪ್ಪಂದದ ಪ್ರಕಾರ ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಣವನ್ನು ನೀಡಬೇಕಾಗಿದೆ. ಆದರೆ, 'ರಾಜ್ಯವು ಈ ಯೋಜನೆಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ' ಎಂದು ಪ್ರಧಾನಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಅಂಕಿಅಂಶ ಸಮೇತ ವಿವರಿಸಿದರು. ಬೆಂಗಳೂರಿನಲ್ಲಿ ಒಟ್ಟಾರೆ 96.10 ಕಿ.ಮೀ. ಉದ್ದದ ಮೆಟ್ರೋ ರೈಲ್ವೆ ಕೆಲಸ ನಡೆದಿದೆ. ಈ ಯೋಜನೆಗೆ ರಾಜ್ಯ ಸರ್ಕಾರ 23 ಸಾವಿರ ಕೋಟಿ ಖರ್ಚು ಮಾಡಿದ್ದರೆ ಕೇಂದ್ರ ಸರ್ಕಾರ 7,467 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರವನ್ನು ಜಾಗತಿಕ ನಗರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ 1.5 ಲಕ್ಷ ಕೋಟಿ ರೂಪಾಯಿ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದರು. ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ಮೋದಿಗೆ ಡಿಸಿಎಂ ಪತ್ರವನ್ನು ಸಲ್ಲಿಸಿದರು. ಭಾರತದ ತಂತ್ರಜ್ಞಾನ ಕೇಂದ್ರ ಮತ್ತು ಎರಡನೇ ಅತಿದೊಡ್ಡ ತೆರಿಗೆ ಕೊಡುಗೆ ನೀಡುವ ಬೆಂಗಳೂರು ನಗರದ ಪಾತ್ರವನ್ನು ಶಿವಕುಮಾರ್ ಉಲ್ಲೇಖಿಸಿದರು. ಆದರೆ ಸಂಚಾರ ದಟ್ಟಣೆ, ನೀರಿನ ಕೊರತೆ ಮತ್ತು ತ್ಯಾಜ್ಯ ನಿರ್ವಹಣೆ ಸೇರಿದಂತೆ ತ್ವರಿತ ನಗರೀಕರಣದ ತುರ್ತು ಸವಾಲುಗಳನ್ನು ಡಿಸಿಎಂ ಪ್ರಧಾನಿಯವರಿಗೆ ಪತ್ರದ ಮೂಲಕ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ನೋಟಿಸ್ ನೀಡಿ ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ. ದಾಖಲೆ ಸಲ್ಲಿಸಿದರೆ ತಮ್ಮ ಕಚೇರಿಗೆ ವಿವರವಾದ ತನಿಖೆ ನಡೆಸಲು ಸಹಾಯವಾಗುತ್ತದೆ ಎಂದು ರಾಹುಲ್ ಗಾಂಧಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ. ಮತಗಟ್ಟೆ ಅಧಿಕಾರಿ ನೀಡಿದ ದಾಖಲೆ ಉಲ್ಲೇಖಿಸಿ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಆರೋಪಿಸಿದ್ದೀರಿ, ವಿಚಾರಣೆ ವೇಳೆ ಶಕುನ್ ರಾಣಿ ತಾವು ಒಂದು ಬಾರಿ ಮಾತ್ರ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ಅವರು ಎರಡು ಬಾರಿ ಮತ ಚಲಾಸಿದ ಮತಗಟ್ಟೆಗಳ ಮಾಹಿತಿ ನೀಡುವಂತೆ ರಾಹುಲ್ ಗಾಂಧಿಗೆ ನೋಟಿಸ್‌ನಲ್ಲಿ ಹೇಳಲಾಗಿದೆ.
ಕೆಲ ದಿನಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ಪಾಂಗಳ ಕ್ರಾಸ್ ಬಳಿ ಎರಡು ಗುಂಪು ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ಮೇಲೆ ಧರ್ಮಸ್ಥಳದ ಪಾಂಗಳ ಕ್ರಾಸ್ ಗುಂಪು ಘರ್ಷಣೆ ಉಂಟಾಗಿತ್ತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದರು. ಈಗಾಗಲೇ ಧರ್ಮಸ್ಥಳ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಇನ್ನುಳಿದ 27 ಮಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.