ಮಂಗಳೂರು: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್(ಜಿಪಿಆರ್) ಸಾಧನ ಬಳಸಿ ಆಪಾದಿತ ಸಮಾಧಿ ಸ್ಥಳ 13ರಲ್ಲಿ ಅಸ್ಥಿಪಂಜರಗಳ ಹುಡುಕಾಟ ನಡೆಸಲಿದೆ.
ಜಿಪಿಆರ್ ಇಂದು ಬೆಳ್ತಂಗಡಿಗೆ ಆಗಮಿಸಿದ್ದು, ನೆಲದಲ್ಲಿರುವ ಸಂಭವನೀಯ ಮಾನವ ಅವಶೇಷಗಳನ್ನು ಪತ್ತೆಹಚ್ಚಲು ಅದೇ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಎಸ್‌ಐಟಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.
ಇಲ್ಲಿಯವರೆಗೆ, ಅನಾಮಿಕ ದೂರುದಾರ ತೋರಿಸಿದ 15 ಸ್ಥಳಗಳನ್ನು ಎಸ್‌ಐಟಿ ಅಗೆದಿದ್ದು, ಸ್ಥಳ 6 ರಲ್ಲಿ ಮಾತ್ರ ಮಾನವ ಅವಶೇಷಗಳು ಪತ್ತೆಯಾಗಿವೆ. ಆದರೆ ಉಳಿದ ಕಡೆಗಳಲ್ಲಿ ಶವ ಪತ್ತೆಯಾಗದ ಕಾರಣ ಜಿಪಿಆರ್ ತಂತ್ರಜ್ಞಾನ ಬಳಸಲು ಎಸ್ಐಟಿ ನಿರ್ಧರಿಸಿದೆ.
ಅನಾಮಿಕ ದೂರುದಾರ ಬಹಳ ಸ್ಪಷ್ಟವಾಗಿ ಹೆಣ ಹೂತಿದ್ದೇನೆ ಎಂದು ಹೇಳಿದ ಕಾರಣಕ್ಕಾಗಿ ಎಸ್ ಐಟಿಯು 12 ಸ್ಥಳಗಳನ್ನು ಅಗೆದಿದೆ. ಆದರೆ ಅಸ್ಥಿಪಂಜರದ ಕುರುಹು ಕೇವಲ 1 ಕಡೆ ಮಾತ್ರ ಸಿಕ್ಕಿದೆ. ಈ ಎಲ್ಲಾ ಪಾಯಿಂಟ್ ಗಳನ್ನು ಸದ್ಯ ಇನ್ನೂ ಕೂಡಾ ರಕ್ಷಿಸಲಾಗಿದೆ.
ಹೀಗಾಗಿ ಉಳಿದೆಡೆ ಶವ ಪತ್ತೆಯಾಗದ ಕಾರಣ ದೂರುದಾರನ ಪರ ವಕೀಲರು ಜಿಪಿಆರ್ ಬಳಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ 13 ನೇ ಪಾಯಿಂಟ್ ಸೇರಿದಂತೆ ಉಳಿದ 12 ಸ್ಪಾಟ್ ಗಳಲ್ಲೂ ಮತ್ತೊಮ್ಮೆ ಅಸ್ಥಿಪಂಜರದ ಕುರುಹು ಶೋಧ ಮಾಡುವ ಸಾಧ್ಯತೆ ಇದೆ.