ಚಿತ್ರದುರ್ಗ: ಅಪ್ರಾಪ್ತ ಬಾಲಕಿಯು ತನ್ನ ಪೋಷಕರು ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಇದನ್ನು ತಪ್ಪಿಸಿ ಎಂದು ತಾನೇ ಖುದ್ದಾಗಿ ಪೊಲೀಸ್ ಸ್ಟೇಷನ್‌ಗೆ ಆಗಮಿಸಿ ದೂರು ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹೆಂಡತಿ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ಹೊರಟಿದ್ದ ಪೋಷಕರಿಂದ ಬಾಲಕಿಯನ್ನು ರಕ್ಷಿಸಲಾಗಿದೆ.
'ನನಗೆ ವಯಸ್ಸಿನ್ನು ಹದಿನಾರು. 8 ನೇ ತರಗತಿಯಲ್ಲಿ, ಓದುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಶಾಲೆಗೆ ಆಗಮಿಸಿ ಬಾಲ್ಯ ವಿವಾಹದಲ್ಲಿ ಅನುಭವಿಸಬೇಕಾದ ತೊಂದರೆ. ಮಾನಸಿಕ, ದೈಹಿಕ ಅಸಮಾತೋಲನದಿಂದ ಆಗುವ ಅನಾನುಕೂಲ, ಮುಂಬರುವ ದಿನಗಳಲ್ಲಿ ಬಂದೊದಗಬಹುದಾದ ಎಡವಟ್ಟು ಬಗ್ಗೆ ಜಾಗೃತಿ ಮೂಡಿಸಿದ್ದರು. ಅಂದು ಶಾಲೆಯಲ್ಲಿ ಕೇಳಿದ್ದ ಪೊಲೀಸರ ಬುದ್ದಿ ಮಾತು ನೆನಪಾಗಿ ನೇರವಾಗಿ ಪೊಲೀಸ್ ಸ್ಟೇಷನ್ ಬಂದೆ ಎಂದು ಬಾಲಕಿಯು ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಸಮ್ಮುಖದಲ್ಲಿ ವಿವರಿಸಿದಳು.
''ನನ್ನ ಹೆಸರು ಅರ್ಚನ (ಹೆಸರು ಬದಲಾಯಿಸಲಾಗಿದೆ) ನಾನೀಗ ಶಾಲೆ ಬಿಟ್ಟು ಮನೆಯಲ್ಲಿದ್ದೇನೆ. ನಮ್ಮ ಅಪ್ಪ, ಅಮ್ಮ ಹಾಗೂ ಅಣ್ಣ ನನಗೆ ಮದುವೆ ಮಾಡಲು ಮುಂದಾಗಿದ್ದಾರೆ. ಮದುವೆ ಮಾಡಲು ಆಗಸ್ಟ್ 17 ರಂದು ದಿನಾಂಕ ನಿಗದಿ ಮಾಡಿದ್ದಾರೆ. ನನಗೆ ಮದುವೆಯಾಗಲು ಈಗಲೇ ಇಷ್ಟವಿಲ್ಲ. ಆದರೂ ನನ್ನ ಪೋಷಕರು ಬಲವಂತ ಮಾಡುತ್ತಿದ್ದಾರೆ'' ಎಂದು ವಿವರಿಸಿದ್ದಾಳೆ..
ನಂತರ ಪಿಎಸ್ಐ ಮಹೇಶ್ ಹೊಸಪೇಟೆ, ತಾಲ್ಲೂಕು ಸಿಡಿಪಿಒ ನವೀನ್ ಕುಮಾರ್, ಹುಡುಗಿಯ ಪೋಷಕರನ್ನು ಕರೆಸಿ ಮದುವೆಯನ್ನು ನಿಲ್ಲಿಸುವಂತೆ ಸೂಚಿಸಿದರು. ಈ ಮಧ್ಯೆ, ಪುನರ್ವಸತಿ ಯೋಜನೆಯ ಪ್ರಕಾರ ಬಾಲಕಿಯನ್ನು ಚಿತ್ರದುರ್ಗದಲ್ಲಿರುವ ಸರ್ಕಾರಿ ಗೃಹಕ್ಕೆ ಕಳುಹಿಸಲಾಗಿದೆ.