ಬೆಂಗಳೂರು: ರಾಜ್ಯದ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪೈಕಿ ಕೇವಲ 329 ಆಸ್ಪತ್ರೆಗಳು ಮಾತ್ರ ಅಗ್ನಿ ಸುರಕ್ಷತೆ ಮಾನದಂಡಗಳನ್ನು ಪಾಲಿಸುತ್ತಿವೆ. ಉಳಿದ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ನಿಯಮಬದ್ಧವಾಗಿಲ್ಲ ಎಂಬ ಅಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿರುವ 2,878 ಸರ್ಕಾರಿ ಆಸ್ಪತ್ರೆಗಳ ಪೈಕಿ 14 ಹಾಗೂ 5,850 ಖಾಸಗಿ ಆಸ್ಪತ್ರೆಗಳ ಪೈಕಿ 315 ಆಸ್ಪತ್ರೆಗಳು ಮಾತ್ರವೇ ಅಗ್ನಿ ಸುರಕ್ಷತೆ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವಿಧಾನಪರಿಷತ್ತಿಗೆ ಮಾಹಿತಿ ನೀಡಿದ್ದಾರೆ,
ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಅವರು ಅಗ್ನಿ ಸುರಕ್ಷತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮಗಳ (ನ್ಯಾಷನಲ್ ಬಿಲ್ಡಿಂಗ್ ಕೋಡ್ ) ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ಒಂದೇ ರೀತಿ ಅಗ್ನಿ ಸುರಕ್ಷತಾ ಕ್ರಮಗಳನ್ನ ಅಳವಡಿಸಿಕೊಳ್ಳಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಆಸ್ಪತ್ರೆಗಳು ನಿಯಮವನ್ನ ಗಾಳಿಗೆ ತೂರಿವೆ. ಕೇವಲ 14 ಸರ್ಕಾರಿ ಹಾಗೂ 315 ಖಾಸಗಿ ಆಸ್ಪತ್ರೆಗಳು ಅಗ್ನಿ ಸುರಕ್ಷತೆ ಮಾನದಂಡ ಪೂರೈಸಿವೆ ಎಂದು ಹೇಳಿದರು.
ಕಳೆದ ವರ್ಷ 3 ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಈ ಬಗ್ಗೆ ಸಭೆ ನಡೆಸಲಾಗಿದೆ. ಈ ಹಿಂದೆ ಅಗ್ನಿ ಅವಘಡಗಳ ಬಗ್ಗೆ ಆಸ್ಪತ್ರೆಗಳು ಮತ್ತು ಆಡಳಿತ ಮಂಡಳಿ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಭವಿಷ್ಯದಲ್ಲಿ ಸಂಭವಿಸುವ ಅನಾಹುತ ತಪ್ಪಿಸಲು ಅಗ್ನಿ ಸುರಕ್ಷತೆ ಅಳವಡಿಸಿದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೇವಲ 14 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸುರಕ್ಷತಾ ಕ್ರಮವಿದೆ. ಉಳಿದ 2,864 ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನ ಪಾಲಿಸದಿರುವುದು ಗಮನಕ್ಕೆ ಬಂದಿದೆ ಎಂದು ಆಘಾತಕಾರಿ ಅಂಶವನ್ನು ಹಂಚಿಕೊಂಡರು.
ಸದ್ಯ ಈ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ನಿಯಮ ಅಳವಡಿಸಲು ಸುಮಾರು 550 ಕೋಟಿ ಖರ್ಚಾಗಲಿದ್ದು, ಹಂತ-ಹಂತವಾಗಿ ಅಗ್ನಿ ಸುರಕ್ಷತಾ ಮಾನದಂಡ ಪಾಲನೆಗೆ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು.