
ಬೆಂಗಳೂರು: ನಗರದಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಗಳ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದರು.
ನಿನ್ನೆಯಷ್ಟೇ ಕೋರಮಂಗಲದ ಫೋರಂ ಮಾಲ್ ಸಮೀಪ ಕೆಫೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಸ್ಥಳಕ್ಕೆ ಸಚಿವ ಪರಮೇಶ್ವರ್ ಹಾಗೂ ಡಿಜಿಪಿ ಕಮಲ್ ಪಂತ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆ ಅಗ್ನಿ ದುರಂತದ ನಂತರ ರಾಜ್ಯ ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇತರರ ತಪ್ಪಿನಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಗ್ನಿ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಫೆ ಮಾಲೀಕರು ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿರುವುದು ಪತ್ತೆಯಾಗಿದೆ. "ಅವರು ಕೇವಲ ಫುಡ್ ಕ್ಯಾಟರಿಂಗ್ ವ್ಯಾಪಾರವನ್ನು ನಡೆಸಲು ಪರವಾನಗಿ ಪಡೆದುಕೊಂಡಿದ್ದರು, ಆದರೆ, ಹುಕ್ಕಾ ಬಾರ್ ಅನ್ನು ನಡೆಸುತ್ತಿದ್ದರು. ಟ್ರೇಡ್ ಲೈಸೆನ್ಸ್‌ನ ಷರತ್ತುಗಳು ಪಾಲನೆಯಾಗಿದೆಯೇ ಎಂದು ಪರಿಶೀಲಿಸುವಲ್ಲಿ ವಿಫಲವಾದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿರುವುದೂ ಕಂಡು ಬಂದಿದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಜಿಪಿ ಕಮಲ್ ಪಂತ್ ಅವರು ಮಾತನಾಡಿ, ಕೆಫೆಯ ಮಾಲೀಕ ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳಿಲ್ಲದೆ ಸುಮಾರು 12 ವಾಣಿಜ್ಯ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ. ರೆಸ್ಟೋರೆಂಟ್ ಮಾಲೀಕರು ಜಾಗರೂಕರಾಗಿರಬೇಕು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ನಡುವೆ ಪ್ರಕರಣ ಸಂಬಂಧ ಕೆಫೆ ಮಾಲೀಕ ಕರಣ್ ಜೈನ್ ಅವರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣ ಸಂಬಂಧ ಕುಂತಲ್ ಆರ್ ಅಮೀನ್ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು, ಅವರನ್ನು ಶೀಘ್ರದಲ್ಲೇ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆಂದು ತಿಳಿದುಬಂದಿದೆ.
ಗಾಯಾಳು ಸ್ಥಿತಿ ಇನ್ನೂ ಗಂಭೀರ
ಈ ನಡುವೆ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರೇಮ್ ಸಿಂಗ್ ಸೌದ್ (29) ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ಎಂದು ತಿಳಿದುಬಂದಿದೆ.
ಪ್ರೇಮ್ ಸಿಂಗ್ ಅವರ ಬಲಗೈ, ಬೆನ್ನು ಸೇರಿದಂತೆ ದೇಹದಲ್ಲಿ ಹಲವು ಮೂಳೆಗಳು ಮುರಿತಗಳಾಗಿದ್ದು, ಮುಂದಿನ 48 ಗಂಟೆಗಳ ಕಾಲ ಐಸಿಯುವಿನಲ್ಲಿ ನಿಗಾ ವಹಿಸಲಾಗುತ್ತಿದ ಎಂದು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಘಟಕದ ಮುಖ್ಯಸ್ಥ ಡಾ.ಗೋವಿಂದಯ್ಯ ಯತೀಶ್ ಹೇಳಿದ್ದಾರೆ.
Advertisement