ಚಾಮರಾಜನಗರ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ 5 ಹುಲಿಗಳ ಸಾವು ಪ್ರಕರಣ ಹಸಿರಾಗಿರುವಂತೆಯೇ ಮತ್ತೆರಡು ಹುಲಿಮರಿಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು.. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ5 ಹುಲಿಗಳ ಸಾವು ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಎರಡು ಹುಲಿ ಮರಿಗಳು ಸಾವನ್ನಪ್ಪಿರುವ ವಿಚಾರ ಸುದ್ದಿಯಾಗಿದೆ.
ಚಾಮರಾಜ ನಗರ ಜಿಲ್ಲೆಯ ಕಾವೇರಿ ವನ್ಯಧಾಮದ ಹೊಳೆಮೂರ್ದಟ್ಟಿ ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ ಎರಡು ಹುಲಿ ಮರಿಗಳ ಸಾವನ್ನಪ್ಪಿದ್ದು, ಹಸಿವಿನಿಂದ ನಿತ್ರಾಣಗೊಂಡು ಮರಿಗಳು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ಮೂಲಗಳ ಪ್ರಕಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಹೊಳೆಮೂರ್ದಟ್ಟಿ ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ 10 ದಿನದ ಹಿಂದೆಯೇ 1 ಹೆಣ್ಣು, 1 ಗಂಡು ಹುಲಿ ಮರಿ ಸಾವನ್ನಪ್ಪಿವೆ ಎನ್ನಲಾಗಿದೆ. ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿ ಮೃತಪಟ್ಟಿರುವುದು ಕಂಡುಬಂದಿದೆ.
ತಾಯಿಯಿಂದ ಮರಿಗಳು ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಎರಡು ಮೂರು ದಿನಗಳ ವ್ಯತ್ಯಾಸದಲ್ಲಿ ಹುಲಿ ಮರಿಗಳ ಸಾವನ್ನಪ್ಪಿವೆ ಎನ್ನಲಾಗಿದೆ.
ಈ ಹುಲಿಮರಿಗಳು ಕೇವಲ 15 ದಿನಗಳ ಹಿಂದೆ ಜನಸಿದ್ದವೆಂದು ಹೇಳಲಾಗಿದ್ದು, ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ತಾಯಿಯಿಂದ ಬೇರ್ಪಟ್ಟ ಹಿನ್ನೆಲೆ ಹಾಲಿಲ್ಲದ ಹಸಿನಿಂದ ಬಳಲಿ ಮೃತಪಟ್ಟಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.