ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆಗಳನ್ನು ನಿಭಾಯಿಸಲು ರಚಿಸಲಾದ ವಿಶೇಷ ಕಾರ್ಯಪಡೆ ಹಿಂದೂಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ಸದಸ್ಯರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಎಸ್‌ಎಎಫ್ ರಚನೆಯಾದ ನಂತರ , ಯಾವುದೇ ಕೋಮು ಪ್ರಕರಣಗಳು ವರದಿಯಾಗಿಲ್ಲ ಎಂದು ಪ್ರತಿಕ್ರಿಯಿಸಿದರು. ಎಸ್‌ಎಎಫ್ ಶಾಶ್ವತ ಕಾರ್ಯಪಡೆ ಅಲ್ಲ ಎಂದು ಅವರು ಹೇಳಿದರು, ಇನ್ನು ಮುಂದೆ ಕೋಮು ಘರ್ಷಣೆಗಳು ಇಲ್ಲ ಎಂದು ನಾವು ಕಂಡುಕೊಂಡರೆ, ಅದಕ್ಕೆ ಅನುಗುಣವಾಗಿ ನಾವು ಎಸ್‌ಎಎಫ್ ವಿಸರ್ಜಿಸುತ್ತೇವೆ ಎಂದು ಹೇಳಿದರು.
ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು, ಕರಾವಳಿ ಭಾಗದಲ್ಲಿ ಗೋ ಕಳ್ಳರು ರಾಜಾರೋಷವಾಗಿ ತಲವಾರು ಸಹಿತ ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುತ್ತಿದ್ದಾರೆ. ವ್ಯಾಪಕವಾಗಿ ಡ್ರಗ್ಸ್ ಪ್ರಕರಣಗಳು ಕಂಡು ಬರುತ್ತಿವೆ. ಇವುಗಳೇ ಇಲ್ಲಿನ ಗಲಭೆಗಳಿಗೆ ಮೂಲ ಕಾರಣ. ಇವುಗಳಿಗೆ ಕಡಿವಾಣ ಹಾಕಿದರೆ ಯಾವ ಗಲಭೆಯೂ ಇರುವುದಿಲ್ಲ. ಕಾರ್ಯಪಡೆಯ ಅಗತ್ಯವೂ ಇರುವುದಿಲ್ಲ ಎಂದು ಹೇಳಿದರು.
ಯಾವುದೇ ಪ್ರಕರಣವಿಲ್ಲದಿದ್ದರೂ 75-80 ವರ್ಷದ ಹಿರಿಯ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು. ಮಧ್ಯರಾತ್ರಿಯಲ್ಲಿ ನುಗ್ಗಿ ಕಿರುಕುಳ ನೀಡುತ್ತಿದ್ದಾರೆ. ಐವನ್ ಡಿಸೋಜರಂತಹ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ಎಂದರೂ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಶಾಸಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ತಾರತಮ್ಯ ನಡೆದಾಗ ಸಾರ್ವಜನಿಕರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಾಗುತ್ತದೆ ಎಂದು ಹೇಳಿದರು.
ಕಾಮತ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಅಲ್ಲಿನವರು ತಮ್ಮ ಮಕ್ಕಳನ್ನು ವ್ಯಾಸಂಗಕ್ಕಾಗಿ ಇತರೆಡೆ ಕಳುಹಿಸುತ್ತಿದ್ದಾರೆ. ಉದ್ಯಮಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಮಾಹಿತಿ ಸಂಗ್ರಹದ ವೇಳೆ ಲಭ್ಯವಾಗಿತ್ತು. ಕೋಮುಸೌಹಾರ್ದವೂ ಹಾಳಾಗಿದೆ ಎಂಬ ಆತಂಕವೂ ಆ ಭಾಗದ ಜನಪ್ರತಿನಿಧಿಗಳಲ್ಲಿದೆ ಎಂದರು.
ನಾನು ಇತ್ತೀಚೆಗೆ ಶಾಂತಿ ಸಭೆ ನಡೆಸಿದ್ದು, ಯಶಸ್ವಿಯಾಗಿದೆ. ಶಾಂತಿಯಿಂದ ಇರಬೇಕು ಎಂಬ ಭಾವನೆ ಎಲ್ಲರಲ್ಲೂ ಬರುತ್ತಿದೆ. ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ನಡೆದಿದೆ ಎಂದೂ ಹೇಳಿದರು. ವಿಶೇಷ ಕಾರ್ಯಪಡೆಯು ಅನಗತ್ಯವಾಗಿ ಯಾರಿಗೂ ತೊಂದರೆ ನೀಡಿಲ್ಲ. ಮಧ್ಯರಾತ್ರಿ ಮನೆಗೆ ಹೋಗಿ ಹಿರಿಯ ನಾಗರಿಕರನ್ನು ವಿಚಾರಣೆ ನಡೆಸುವ ಕೆಲಸವನ್ನೂ ಮಾಡಿಲ್ಲ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಸ್ಥಿತಿಗತಿ ಬಗ್ಗೆ ನಾನೇ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳ ಸಹಕಾರವೂ ಮುಖ್ಯ ಎಂದರು.