ಬೆಂಗಳೂರು: ಧರ್ಮಸ್ಥಳ "ಸಾಮೂಹಿಕ ಸಮಾಧಿ" ಪ್ರಕರಣದ ಸಾಕ್ಷಿ ದೂರುದಾರನ ಆರೋಪಗಳು ಸುಳ್ಳು ಎಂದು ವಿಶೇಷ ತನಿಖಾ ತಂಡಕ್ಕೆ ಕಂಡುಬಂದರೆ ಆತನ ವಿರುದ್ಧ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಬಗ್ಗೆ ಒತ್ತಿ ಹೇಳಿದ ಪರಮೇಶ್ವರ, "ಯಾವುದೇ ರಾಜಕೀಯ ಅಥವಾ ಧರ್ಮ ಒಳಗೊಂಡಿರಬಾರದು. ಕಾನೂನಿನ ಚೌಕಟ್ಟಿನೊಳಗೆ ಸತ್ಯ ಹೊರಹೊಮ್ಮಬೇಕು" ಎಂಬ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಧರ್ಮಸ್ಥಳ ಮತ್ತು ಅಲ್ಲಿನ ದೇವಸ್ಥಾನ ಗುರಿಯಾಗಿಸಿಕೊಂಡು "ಅಪಪ್ರಚಾರ" ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಮಧ್ಯಂತರ ವರದಿ ಪಡೆಯಬೇಕು ಹಾಗೂ ದೂರುದಾರ ಮತ್ತು ಅವರ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಶಾಸಕರು ಒತ್ತಾಯಿಸಿದರು.
"ಈ ವಿಷಯವು ರಾಜಕೀಯ ಅಥವಾ ಧಾರ್ಮಿಕ ತಿರುವುಗಳನ್ನು ಪಡೆಯಬಾರದು ಎಂಬುದು ನನ್ನ ಏಕೈಕ ವಿನಂತಿ. ಸರ್ಕಾರ ಯಾವುದೇ ಒತ್ತಡದಿಂದ ಎಸ್‌ಐಟಿಯನ್ನು ರಚಿಸಿಲ್ಲ. ನಾವು ಇಲ್ಲಿಯವರೆಗೆ ಒತ್ತಡಕ್ಕೆ ಮಣಿದಿಲ್ಲ ಮತ್ತು ಭವಿಷ್ಯದಲ್ಲಿ ಹಾಗೆ ಮಣಿಯುವುದಿಲ್ಲ. ಸತ್ಯವನ್ನು ಬಹಿರಂಗಪಡಿಸುವುದು ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ಉದ್ದೇಶ" ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ನಾನು ಸೇರಿದಂತೆ ಆಡಳಿತ ಪಕ್ಷದ ಎಲ್ಲರಿಗೂ ಧರ್ಮಸ್ಥಳದ ಬಗ್ಗೆ ಅಪಾರ ಗೌರವ ಮತ್ತು ಭಕ್ತಿ ಇದೆ. ನಾನು ದೇವಸ್ಥಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು.
ಎಸ್‌ಐಟಿ ತನಿಖೆಯ ಪ್ರಗತಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, "ಪೊಲೀಸರು ನ್ಯಾಯದ ಅನ್ವೇಷಣೆಯಲ್ಲಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಆದರೆ ದೂರುದಾರರು ಹೇಳುವ ಎಲ್ಲವನ್ನೂ ಅವರು ಮಾಡುತ್ತಿಲ್ಲ. ಒಂದು ಮಿತಿ ಇದೆ ಮತ್ತು ಸತ್ಯವು ಸರಿಯಾದ ಸಮಯದಲ್ಲಿ ಹೊರಬರುತ್ತದೆ. ಯಾರೂ ತನಿಖೆಯ ದಾರಿ ತಪ್ಪಿಸಲು ಸಾಧ್ಯವಿಲ್ಲ" ಎಂದು ಹೇಳಿದರು.