ಬೆಂಗಳೂರು: ಡಿಸೆಂಬರ್ ಅಂತ್ಯದ ವೇಳೆಗೆ 2 ಲಕ್ಷ ರೈತರಿಗೆ ದರಖಾಸ್ತು ಪೋಡಿ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಹಿಂದೆ ಎರಡೂ ಸರ್ಕಾರದ ಅವಧಿಯಲ್ಲಿ ಅರ್ಜಿ ಕೊಟ್ಟವರದ್ದು ಮಾತ್ರ ಏಕವ್ಯಕ್ತಿ ಪೋಡಿ ಆಗುತ್ತಿತ್ತು. ಆದರೆ, ಈಗ ಏಕವ್ಯಕ್ತಿ ಪೋಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪ್ರಸ್ತುತ ಸರ್ಕಾರ ಯಾರ ಅರ್ಜಿಗೂ ಕಾಯುತ್ತಿಲ್ಲ. ಬದಲಾಗಿ ಮಂಜೂರಿದಾರರ ದಾಖಲೆಗಳನ್ನು ನಾವೇ ತಯಾರು ಮಾಡಿ ಅಭಿಯಾನ ಮಾದರಿಯಲ್ಲಿ ಪೋಡಿ ಮಾಡಿ ಕೊಡುತ್ತಿದ್ದೇವೆಂದು ಹೇಳಿದರು.
ರಾಜ್ಯದಲ್ಲಿ ಎಷ್ಟು ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ ಎಂಬ ಸರಿಯಾದ ದಾಖಲೆ ಇಲ್ಲ. ಪ್ರತಿ ಅಧಿವೇಶನದಲ್ಲೂ ಈ ಪ್ರಶ್ನೆ ಸರ್ವೇ ಸಾಮಾನ್ಯ. ಆದರೆ, ಉತ್ತರವಾಗಿ ದೊರಕುವ ಅಂಕಿಸಂಖ್ಯೆ ಮಾತ್ರ ನಿಖರ ಅಲ್ಲ. ಕಾಲದಿಂದ ಕಾಲಕ್ಕೆ ಈ ಸಂಖ್ಯೆ ಬದಲಾಗುತ್ತಲೇ ಇದೆ. ಹೀಗಾಗಿ ಪ್ರಸ್ತುತ ರಾಜ್ಯದ ಎಲ್ಲಾ ಸರ್ಕಾರಿ ಜಮೀನಿನಲ್ಲಿ ಯಾರ್ಯಾರಿಗೆ ಜಮೀನು ಮಂಜೂರು ಆಗಿದೆ ಎಂದು ನಾವೇ ಆನ್ಲೈನ್ ನಲ್ಲಿ 1ಟೂ5 ಮಾಡಿಕೊಡಲು ಮುಂದಾಗಿದ್ದೇವೆ. ಈ ಪ್ರಕ್ರಿಯೆ ಅಂತ್ಯವಾದರೆ ರಾಜ್ಯದಲ್ಲಿ ಎಷ್ಟು ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ ಎಂಬ ನಿಖರ ಅಂಕಿಅಂಶ ದೊರಕಲಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ 73,390 ಸರ್ವೇ ನಂಬರ್ಗಳಲ್ಲಿ ಮಂಜೂರಿದಾರರು ಇದ್ದಾರೆ ಎಂದು ಪತ್ತೆ ಮಾಡಿದ್ದೇವೆ. ಈ ಸರ್ವೇ ನಂಬರ್ನಲ್ಲಿ 2,51,000 ಮಂಜೂರಿದಾರರು ಇದ್ದಾರೆ. ಇನ್ನೂ 67,000 ಸರ್ವೇ ನಂಬರ್ಗಳಲ್ಲಿ ಈವರೆಗೆ 1ಟೂ5 ಆಗಿಲ್ಲ. ಈ ಕೆಲಸವನ್ನು ಶೀಘ್ರ ಮಾಡಬೇಕಿದೆ. ಇದನ್ನೂ 1ಟೂ5 ಮಾಡಿದಾಗ ಒಟ್ಟಾರೆ ಎಷ್ಟು ಮಂಜೂರಿದಾರರು ಇದ್ದಾರೆ ಎಂಬ ನಿಖರ ಮಾಹಿತಿ ತಿಳಿಯಲಿದೆ ಎಂದರು.
ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಲು ಐದು ದಾಖಲಾತಿ ಇರಬೇಕೆಂಬ ನಿಯಮ ಸಡಿಲಗೊಳಿಸಿ ಮೂರು ದಾಖಲೆಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಇದರಿಂದ 1,17,639 ಮಂದಿ ಭೂ ಮಂಜೂರುದಾರರ ಪೋಡಿ ಕಾರ್ಯವಾಗಿದೆ. ಕನಿಷ್ಟ ಎರಡು ದಾಖಲೆಗಳಿದ್ದರೂ ಪೋಡಿ ಮಾಡುವಂತೆ ಸೂಚಿಸಿದ್ದು, ಇದರಿಂದ ಬರುವ 15 ದಿನದೊಳಗಾಗಿ 30 ಸಾವಿರ ಮಂದಿ ಸೇರ್ಪಡೆಯಾಗಲಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ 2 ಲಕ್ಷ ಮಂದಿಗೆ ಪೋಡಿ ಕಾರ್ಯ ಮುಗಿಸುವ ಗುರಿ ಹೊಂದಲಾಗಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಕಂದಾಯ ಕಚೇರಿಗಳಲ್ಲಿ ಜಮೀನಿಗೆ ಸಂಬಂಧಿಸಿದಂತೆ ಮೂಲ ಕಡತಗಳು ಕಾಣೆಯಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಕಂದಾಯ ಕಚೇರಿಗಳಲ್ಲಿರುವ ಭೂ ಸಂಬಂಧಿಸಿದಂತೆ ಮೂಲ ಕಡತಗಳ ಸಂರಕ್ಷಣೆಗಾಗಿ 100 ಕೋಟಿ ಪುಟಗಳಿರುವ ದಾಖಲಾತಿಗಳನ್ನ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸದ್ಯ 36 ಕೋಟಿ ಪುಟಗಳ ಸ್ಕ್ಯಾನಿಂಗ್ ಕಾರ್ಯ ಮುಗಿದಿದೆ. ಮುಂದಿನ ವರ್ಷ ಫೆಬ್ರುವರಿಯೊಳಗೆ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳಿಸಲಾಗುವುದು. ಇದರಿಂದ ನಕಲಿ ದಾಖಲೆ ಸೃಷ್ಟಿ, ದಾಖಲೆ ತಿದ್ದುವ ಅಥವಾ ಕಳೆದುಹಾಕುವ ಪ್ರಸಂಗಗಳಿಂದ ರೈತರಿಗೆ ಆಗುತ್ತಿದ್ದ ಶೋಷಣೆಗೆ ಪೂರ್ಣ ವಿರಾಮ ನೀಡುವುದು ಕಂದಾಯ ಇಲಾಖೆ ಹಾಗೂ ಸರ್ಕಾರದ ಉದ್ದೇಶ ಎಂದು ಮಾಹಿತಿ ನೀಡಿದರು.