ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದರು.
ವಿಧಾನಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಹಾಗೂ ಬಿಜೆಪಿಯ ಡಿ.ಎಸ್. ಅರುಣ್ ಅವರ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸುವ ವಿಷಯದ ಬಗ್ಗೆ ಅವರು ಉತ್ತರ ನೀಡಿದರು.
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸಿನಂತೆ ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳ ಸೀಮಾ ಗಡಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರ ಸಂಖ್ಯೆ ನಿಗದಿ ಪಡಿಸುವ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಜೊತೆಗೆ ಕ್ಷೇತ್ರಗಳ ಸೀಮಾ ಗಡಿಯನ್ನು ಗುರುತಿಸಿ ಅಧಿಸೂಚಿಸಲಾಗಿದೆ ಎಂದರು.
ಕ್ಷೇತ್ರಗಳ ಮೀಸಲು ನಿಗದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅದು ಪೂರ್ಣಗೊಂಡ ನಂತರ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.