ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ಜಾಮೀನು ರದ್ದುಗೊಂಡು ಮತ್ತೆ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ ಐವರಿಗೆ ವಿಚಾರಣಾಧೀನ ಕೈದಿ ನಂಬರ್ ನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ.
ಪ್ರಕರಣದ ಎ-1 ಆರೋಪಿಯಾಗಿರುವ ಪವಿತ್ರ ಗೌಡ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 7313, ಎ-2 ಆರೋಪಿ ದರ್ಶನ್ ಅವರಿಗೆ 7314, ಎ-11 ಆರೋಪಿ ದರ್ಶನ್ ಅವರ ವ್ಯವಸ್ಥಾಪಕ ಆರ್. ನಾಗರಾಜ್ ಗೆ 7315, ಎ-12 ಆರೋಪಿಾಗಿರುವ ದರ್ಶನ್ ಕಾರು ಚಾಲಕ ಎಂ. ಲಕ್ಷ್ಮಣ್ ಗೆ 7316, ಹಾಗೂ ಎ-14 ಆರೋಪಿಯಾಗಿರುವ ಪ್ರದೂಷ್ ರಾವ್ ಅವರಿಗೆ 7317 ನಂಬರ್ ನೀಡಲಾಗಿದೆ.
ಇದೇ ಪ್ರಕರಣದಲ್ಲಿ ಕಳೆದ ವರ್ಷ ಜೂನ್ ನಲ್ಲಿ ಬಂಧಿಸಿದ್ದಾಗ ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 6106 ನೀಡಲಾಗಿತ್ತು. ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾದ ಮೇಲೆ ಅಲ್ಲಿ ದರ್ಶನ್ ಗೆ ಕೈದಿ ನಂಬರ್ 511ನ್ನು ನೀಡಲಾಗಿತ್ತು.
ದರ್ಶನ್ ಸೇರಿ ಐವರನ್ನು ಗುರುವಾರ ರಾತ್ರಿ ಅಡ್ಮಿಷನ್ ಕ್ವಾರಂಟೈನ್ ಬ್ಯಾರಕ್ ನಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ತಿಂಡಿ ನೀಡಿದ ಬಳಿಕ ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್ ಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್ ಅವರು ಮೌನಕ್ಕೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ರಾತ್ರಿ ನಿದ್ರೆ ಮಾಡದೇ ಕಾರಾಗೃಹದ ಕೋಣೆಯಲ್ಲಿ ಸಮಯ ಕಳೆದಿದ್ದಾರೆ. ಖಿನ್ನತೆಯಿಂದ ಬಳಲುತ್ತಿರುವ ದರ್ಶನ್ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಗೈರು ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
2024 ರಲ್ಲಿ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ದರ್ಶನ್ ಮತ್ತು ಗ್ಯಾಂಗ್ ಗೆ ಗುರುವಾರ ಸುಪ್ರೀಂ ಕೋರ್ಟ್ ಶಾಕ್ ನೀಡಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಗುರುವಾರ ಬೆಂಗಳೂರು ಪೊಲೀಸರಿಂದ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಬಂಧಿಸಲ್ಪಟ್ಟರು.