ಸಿಎಂ ಸಿದ್ದರಾಮಯ್ಯ ಮತ್ತಿತರರು 
ರಾಜ್ಯ

SCSP/TSP Scheme: 38,717 ಕೋಟಿ ರೂ ವೆಚ್ಚ, ಶೇ.97ರಷ್ಟು ಪ್ರಗತಿ- ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆಗಳಿಗೆ ರೂ. 2.97 ಲಕ್ಷ ಕೋಟಿಯಷ್ಟು ಹಣ ಈವರೆಗೆ ಖರ್ಚು ಮಾಡಲಾಗಿದೆ.

ಬೆಂಗಳೂರು: ಕಳೆದ ವರ್ಷ ಎಸ್‌ಸಿಎಸ್‌‌ಪಿ/ಟಿಎಸ್‌ಪಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ. 38,793 ಕೋಟಿ ಬಿಡುಗಡೆಯಾಗಿದ್ದು, ರೂ. 38,717ಕೋಟಿ ವೆಚ್ಚ ಮಾಡಿ ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ರೂ. 880 ಕೋಟಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಎಸ್‌ಸಿಎಸ್‌ಪಿ/ ಟಿಎಸ್‌ಪಿ ಕಾಯ್ದೆ ಜಾರಿಗೊಂಡು 10 ವರ್ಷವಾದ ಹಿನ್ನೆಲೆಯಲ್ಲಿ ಇದರ ಅನುಷ್ಠಾನದ ಪ್ರಗತಿ ಬಗ್ಗೆ ಐಸೆಕ್ ವತಿಯಿಂದ ಮೌಲ್ಯಮಾಪನ ನಡೆಸಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಹೆಚ್ಚಿರುವ 39 ತಾಲೂಕುಗಳನ್ನು ಗುರುತಿಸಿ ಅಧ್ಯಯನ ಕೈಗೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ, ಜೀವನಮಟ್ಟ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಮಾನದಂಡಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ ಎಂದರು.

ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ಈ ಅವಧಿಯಲ್ಲಿ ಶೇ.9.6 ರಷ್ಟು ವಾರ್ಷಿಕ ಪ್ರಗತಿ ಸಾಧಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಕಳೆದ 10 ವರ್ಷಗಳಲ್ಲಿ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯಲ್ಲಿರುವುದು ಸ್ಪಷ್ಟವಾಗಿದೆ. ಕಾಯ್ದೆ ಪ್ರಕಾರ ಪ್ರತಿವರ್ಷ ಕನಿಷ್ಠ ಶೇ.24.1 ರಷ್ಟು ಅನುದಾನ ನೀಡಬೇಕಾಗಿದೆ. ಆದರೆ 2019-20ರ ಅವಧಿಯಲ್ಲಿ ನಿಗದಿತ ಶೇಕಡಾಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಯ್ದೆ ಜಾರಿ ಬಳಿಕ ಒಟ್ಟು ರೂ.2.97 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ ಅನುದಾನದ ವಿನಿಯೋಗ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಜೀವನ ಮಟ್ಟ ಮತ್ತು ವಾಸಸ್ಥಳಗಳ ಅಭಿವೃದ್ಧಿಪಡಿಸುವುದು ಕಾಯ್ದೆಯ ಉದ್ದೇಶ. ಯಾವುದೇ ಕಾರಣಕ್ಕೂ ಕಾಯ್ದೆಯ ಆಶಯಕ್ಕೆ ಭಂಗ ಬರಬಾರದು. ಆಯಾ ಇಲಾಖೆಯವರು ಸಮರ್ಪಕ ಕ್ರಿಯಾ ಯೋಜನೆ ರೂಪಿಸಿ ಪರಿಶಿಷ್ಟ ಜಾತಿ/ಪಂಗಡದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಗೆ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಬೇಕು. ಅನುಷ್ಠಾನ ಇಲಾಖೆಗೆ ಬದ್ಧತೆ ಬೇಕು. ಕಳೆದ 10 ವರ್ಷಗಳಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಾಗಿಲ್ಲ ಎಂದರು.

ವಿವಿಧ ಕಲ್ಯಾಣ ಯೋಜನೆಗಳಡಿ ಬ್ಯಾಂಕ್‌ಗಳು ಸಕಾಲದಲ್ಲಿ ಹಣಕಾಸು ನೆರವು ಒದಗಿಸುವುದನ್ನು ಖಾತ್ರಿಪಡಿಸಬೇಕು. ಸಾಲ ಸೌಲಭ್ಯ ಒದಗಿಸಲು ವಿಳಂಬ ಧೋರಣೆ ತೋರಿಸುವ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳು ಶೇ.100ರಷ್ಟು ಎಸ್‌ಸಿ/ಎಸ್‌ಟಿ ಜನರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವರ್ಷ ರೂ. 42,017.51 ಕೋಟಿ ಹಂಚಿಕೆ ಮಾಡಿದ್ದೇವೆ. ಈ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡಲು ಅದಷ್ಟು ಬೇಗನೆ ಕ್ರಿಯಾ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಕಾರ್ಯ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ಬಾಕಿಯುಳಿಯಬಾರದು. ಶೇ.100ರಷ್ಟು ಪ್ರಗತಿ ಸಾಧಿಸಲೇಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸುವ ಕಾರ್ಯ ಆಗಬೇಕು ಎಂದರು.

ಈವರೆಗೆ ರೂ. 2.97 ಲಕ್ಷ ಕೋಟಿ ಹಣ ವೆಚ್ಚ: ಕರ್ನಾಟಕದ ಇತಿಹಾಸದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆಗಳಿಗೆ ರೂ. 2.97 ಲಕ್ಷ ಕೋಟಿಯಷ್ಟು ಹಣ ಈವರೆಗೆ ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿಯೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜೀವನಮಟ್ಟ ಸುಧಾರಣೆ ಆಗದಿದ್ದರೆ ನಾಚಿಕೆಗೇಡು. ಕಳೆದ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ವಸತಿ ಯೋಜನೆಗಳಿಗೆ ರೂ.1,086 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿಯೊಬ್ಬ ಅರ್ಹ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ದೇವದಾಸಿ ಪುನರ್‌ವಸತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ಸೆಪ್ಟಂಬರ್‌ ಮೊದಲ ವಾರದಿಂದ ಪುನರ್‌ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ದೇವದಾಸಿ ಪದ್ಧತಿಯನ್ನು ಈಗಾಗಲೇ ನಿರ್ಬಂಧಿಸಲಾಗಿದ್ದು, ಯಾವುದೇ ಕಾರಣಕ್ಕೂ ದೇವದಾಸಿ ಪದ್ಧತಿ ಮುಂದುವರೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Amritsar: ಉಗ್ರರ ದಾಳಿ ಸಂಚು ವಿಫಲ; ISI ಜೊತೆಗೆ ನಂಟು ಹೊಂದಿದ್ದ ಇಬ್ಬರ ಬಂಧನ; ರಾಕೆಟ್ ಚಾಲಿತ ಗ್ರೆನೇಡ್ ವಶಕ್ಕೆ!

ವ್ಲಾಡಿಮಿರ್ ಕ್ರಾಮ್ನಿಕ್ ವಂಚನೆ ಆರೋಪ: ಗ್ರ್ಯಾಂಡ್ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಆತ್ಮಹತ್ಯೆ; ನಿಹಾಲ್ ಸರಿನ್ ಆಕ್ರೋಶ!

ಮಾನ್ಯ ವೀಸಾ ಹೊಂದಿದ್ದರೂ ಹಿಂದಿ ವಿದ್ವಾಂಸೆ ಫ್ರಾನ್ಸೆಸ್ಕಾ ಓರ್ಸಿನಿಗೆ ಭಾರತ ಪ್ರವೇಶಕ್ಕೆ ನಿರಾಕರಣೆ!

ಸೊಸೆ ಜೊತೆ ತಂದೆ ಅಕ್ರಮ ಸಂಬಂಧ: ಮಗನ ಕೊಲೆ ಆರೋಪ; ತಂದೆ ಮಾಜಿ DGP ಮುಸ್ತಫಾ, ತಾಯಿ, ಪತ್ನಿ ವಿರುದ್ಧ FIR!

India 'Proxy war': ಪಾಕಿಸ್ತಾನದ ಆರೋಪಕ್ಕೆ ಅಪ್ಘಾನಿಸ್ತಾನ ತಿರುಗೇಟು! ಹೇಳಿದ್ದೇನು? Video

SCROLL FOR NEXT