ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಹೆಬ್ಬಾಳ ಮೇಲ್ಸೇತುವೆ ಎಂದರೆ ಸಾಮಾನ್ಯವಾಗಿ ಯಾವಾಗಲೂ ಸಂಚಾರ ದಟ್ಟಣೆ.
ಹೆಬ್ಬಾಳ ಮೇಲ್ಸೇತುವೆ ಟ್ರಾಫಿಕ್ ಸಮಸ್ಯೆಯನ್ನು ದೂರ ಮಾಡಲು ನೂತನ ಮೇಲ್ಸೇತುವೆ ನಿರ್ಮಾಣವಾಗಿದ್ದು ಕೊನೆಗೂ ಇಂದು ಲೋಕಾರ್ಪಣೆಗೊಂಡಿದೆ.
ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದಾರೆ. ಕೆ ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆ ಸಂಪರ್ಕಿಸುವ 700 ಮೀಟರ್ ಉದ್ದದ ಹೊಸ ಮೇಲ್ಸೇತುವೆಯನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
700 ಮೀಟರ್ ಉದ್ದದ ಮೇಲ್ಸೇತುವೆ
ಮೇಲ್ಸೇತುವೆ 700 ಮೀಟರ್ ಉದ್ದವಿದ್ದು, ಕೆ.ಆರ್. ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗಲು ಈ ಮೇಲ್ಸೇತುವೆ ವಾಹನ ಸವಾರರ ಓಡಾಟಕ್ಕೆ ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಈ ಫ್ಲೈ ಓವರ್ ನಿರ್ಮಿಸಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 31 ತಿಂಗಳಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ 80 ಕೋಟಿ ರೂ. ವೆಚ್ಚವಾಗಿದೆ.
ನಾನು ಅಧಿಕಾರಕ್ಕೆ ಬಂದ ಮೇಲೆ ಅನುಮತಿ
ಉದ್ಘಾಟನೆ ಬಳಿಕ ಮಾತಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಮೇಲ್ಸೇತುವೆ ಸಹಾಯವಾಗಲಿದೆ. ಈ ಮೇಲ್ಸೇತುವೆ ಪ್ರಸ್ತಾಪಕ್ಕೆ ಬಂದಿತ್ತು. ಆದರೆ ಕಾರ್ಯರೂಪಕ್ಕೆ ತಂದಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಹಣ ಒದಗಿಸಿ, ಅನುಮತಿ ನೀಡಿದ್ದೇನೆ. ಒಟ್ಟು 300 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ನವೆಂಬರ್ ಒಳಗೆ ಪೂರ್ಣ
ಇನ್ನೊಂದು ಜಂಕ್ಷನ್ ಸೇರಿಸಲಾಗುವುದು, 6 ಲೇನ್ ಆಗಲಿದೆ. ನವೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಮೂರು ತಿಂಗಳಲ್ಲಿ ಮತ್ತೊಂದು ಲೂಪ್ ಬರಲಿದೆ. ಮತ್ತೊಂದು ಲೂಪ್ ಈಸ್ಟಿನ್ ಮಾಲ್‌ನಿಂದ 1 ಕಿ.ಮೀ ದೂರದ ಟನಲ್ ಆಗಲಿದೆ. ಎಮೆರ್ಜೆನ್ಸಿಗೆ ಇದರ ಬಳಕೆ ಸಾಧ್ಯವಾಗುತ್ತದೆ. ಏರ್ಪೋರ್ಟ್ ನಿಂದ ಬರುವವರಿಗೆ ಇದು ಅನುಕೂಲವಾಗಲಿದೆ. ಟನಲ್ ಯೋಜನೆಗೆ ಸದ್ಯದಲ್ಲಿಯೇ ಹೊಸ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಫ್ಲೈ ಓವರ್ ನಲ್ಲಿ ಬೈಕ್ ಓಡಿಸಿದ ಡಿಸಿಎಂ
ಉದ್ಘಾಟನೆಗೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಬೈಕ್ ಸವಾರಿ ಮಾಡಿದರು. ತಮ್ಮ ನೆಚ್ಚಿನ ಯೆಜ್ಡಿ-1981 ಬೈಕ್ ಹತ್ತಿ ಹೆಬ್ಬಾಳ ನೂತನ ಮೇಲ್ಸೇತುವೆ ಮೇಲೆ ಸವಾರಿ ಮಾಡಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು.
ಈ ವೇಳೆ ಸಚಿವರಾದ ಭೈರತಿ ಸುರೇಶ್, ಕೃಷ್ಣಭೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಹ್ಯಾರಿಸ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಉಪಸ್ಥಿತರಿದ್ದರು.