ರಾಜ್ಯ

News headlines 18-08-2025 | ಧರ್ಮಸ್ಥಳ ಕೇಸ್: ಶವ ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ; ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ; ಲೈಂಗಿಕ ಕಿರುಕುಳ: UP ಮಾಜಿ ಶಾಸಕನ ವಿರುದ್ಧ ಬೆಂಗಳೂರಿನಲ್ಲಿ ಕೇಸ್

ಧರ್ಮಸ್ಥಳ ಕೇಸ್: ಶವ ಶೋಧಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ- ಗೃಹ ಸಚಿವ ಡಾ.ಜಿ ಪರಮೇಶ್ವರ್

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸಮಾಧಿಗಳ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಸದನಕ್ಕೆ ಮಾಹಿತಿ ನೀಡಿದರು. ಅಧಿವೇಶನದ ಕಲಾಪದಲ್ಲಿ ಮಾತನಾಡಿದ ಗೃಹ ಸಚಿವರು, ಈಗಾಗಲೇ ಶೋಧ ನಡೆಸಲಾದ ಸ್ಥಳಗಳಿಂದ ಸಂಗ್ರಹಿಸಲಾದ ಮಣ್ಣಿನ ಸ್ಯಾಂಪಲ್‌ಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿ ಬರುವವರೆಗೂ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ವರದಿ ಬಂದ ನಂತರವಷ್ಟೇ ಶೋಧ ಕಾರ್ಯದ ಮುಂದಿನ ಹಾದಿ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಶೋಧ ಕಾರ್ಯ ಸ್ಥಗಿತಗೊಳಿಸಿರುವ SIT ಅಧಿಕಾರಿಗಳು ಎರಡು ದಿನಗಳಿಂದ ಸಾಕ್ಷಿ-ದೂರುದಾರನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಧರ್ಮಸ್ಥಳ ಕೇಸ್: ಸದನದಲ್ಲಿ ಆಡಳಿತ-ವಿಪಕ್ಷಗಳ ನಡುವೆ ವಾಕ್ಸಮರ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸಾಮೂಹಿಕ ಅಂತ್ಯಕ್ರಿಯೆಯ ಆರೋಪ ಹಾಗೂ ಆ ಮೂಲಕ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ವಿಷಯ ಇಂದು ಸದನದಲ್ಲಿ ಭಾರಿ ಸದ್ದು ಮಾಡಿ, ಆಡಳಿತ- ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ಈ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರವೇ ಇದೆ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ '28 ಕೊಲೆ ಮಾಡಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ನಾವೇನು ಸುಮ್ಮನೆ ಕುಳಿತಿಲ್ಲ ಮೌನವಾಗೇನೂ ಇಲ್ಲ.. ಸೂಕ್ತ ಉತ್ತರ ನೀಡುತ್ತೇವೆ.. ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸ್ ಕಮಿಷನರ್ ಸೂಚನೆ ಕೊಟ್ಟಿದ್ದೇನೆ. ಸರ್ಕಾರವೇನೂ ಅಸಹಾಯಕವಾಗಿ ಕುಳಿತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

UP ಮಾಜಿ ಶಾಸಕನ ವಿರುದ್ಧ ಬೆಂಗಳೂರಿನಲ್ಲಿ ಕೇಸ್

ಉತ್ತರ ಪ್ರದೇಶದ ಶಿವಸೇನೆ ಮಾಜಿ ಶಾಸಕ ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ವಿರುದ್ಧ 40 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆಯೊಡ್ಡಿದ' ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಜಿ ಶಾಸಕರ ಒತ್ತಾಯದ ಮೇರೆಗೆ ಮಹಿಳೆ ತನ್ನ ಅಪ್ರಾಪ್ತ ಮಗನೊಂದಿಗೆ ಆಗಸ್ಟ್ 14 ರಂದು ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಪಂಚತಾರಾ ಹೋಟೆಲ್‌ನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದು, ವಿರೋಧಿಸಿದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ

ಬೆಂಗಳೂರಿನ ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ನ್ನು ಇಂದು ಸಿಎಂ, ಡಿಸಿಎಂ ಉದ್ಘಾಟಿಸಿದರು. ಈ ವಿಸ್ತರಿತ ಮೇಲ್ಸೆತುವೆ ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸಲಿದೆ. ಉದ್ಘಾಟನೆ ನಂತರ ಮಾತನಾಡಿರುವ ಡಿಸಿಎಂ, 80 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಏರ್ ಪೋರ್ಟ್ ಬರುವವರಿಗೆ ಅನುಕೂಲವಾಗಲಿ ಎಂದು ಹೇಳಿದ್ದಾರೆ.

TB Damನ 7 ಕ್ರೆಸ್ಟ್ ಗೇಟ್‌ ಗಳಲ್ಲಿ ಸಮಸ್ಯೆ!

ತುಂಗಭದ್ರಾ ಅಣೆಕಟ್ಟಿನ 7 ಕ್ರೆಸ್ಟ್ ಗೇಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿಕೆ ನೀಡಿದ್ದು ಈ ಹೇಳಿಕೆ ಸ್ಥಳೀಯ ರೈತರು ಮತ್ತು ಜಲಾನಯನ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಚಿವರ ಹೇಳಿಕೆ ಬಳಿಕ ಅಣೆಕಟ್ಟಿನ ಸ್ಥಿತಿಗತಿಯನ್ನು ನಿರ್ಣಯಿಸಲು ತಜ್ಞರ ತಂಡವನ್ನು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಕಳೆದ ವರ್ಷ ಕ್ರೆಸ್ಟ್ ಗೇಟ್ ಸಂಖ್ಯೆ 19 ರ ಸರಪಳಿ ತುಂಡಾಗಿ ಗೇಟ್ ಮುರಿದು ನದಿಗೆ ಬಿದ್ದಿತ್ತು. ಇದೇ ರೀತಿಯ ಪರಿಸ್ಥಿತಿ ಕುರಿತು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯವಾಗಿ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, 33 ಕ್ರಸ್ಟ್ ಗೇಟನ್ನೂ ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲದಲ್ಲಿ ಭಾರಿ ಭೂಕುಸಿತ: ಬಸ್‌ ಮೇಲೆಯೇ ಬಿದ್ದ ಪರ್ವತ; ಕನಿಷ್ಠ 18 ಮಂದಿ ಸಾವು

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI

SCROLL FOR NEXT