ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್ಆರ್ ಟಿಸಿ), ಕಲ್ಯಾಣ ಕರ್ನಾಟಕ, ಈಶಾನ್ಯ ಕರ್ನಾಟಕ ಹಾಗೂ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಸಂಸ್ಥೆಗಳ ಬಸ್ಸುಗಳಲ್ಲಿ 2023ರ ಜೂನ್ ನಿಂದ 2025ರ ಜುಲೈವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ದ ದಾಖಲೆಗೆ ಭಾಜನವಾಗಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಎಂಬ ಸಂಸ್ಥೆಯು ಈ ಬಗ್ಗೆ ಅಧ್ಯಯನ ಮಾಡಿ, ಕೆಎಸ್ ಆರ್ ಟಿಸಿಗೆ ದಾಖಲೆಯ ಪ್ರಮಾಣ ಪತ್ರ ನೀಡಿದೆ. 2023ರ ಜೂ. 11ರಿಂದ 2025ರ ಜು. 20ರವರೆಗಿನ ಅವಧಿಯಲ್ಲಿ 504 ಕೋಟಿ (504,90,04,760) ಮಹಿಳಾ ಪ್ರಯಾಣಿಕರು ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಸಂಚರಿಸಿದ್ದಾರೆ ಎಂದು ದಾಖಲೆಯ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ, ಕರ್ನಾಟಕದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರ ನೇತೃತ್ವದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯನ್ನು ಮಹಿಳೆಯರ ಸಬಲೀಕರಣಕ್ಕಾಗಿ ಈ ಮೂಲಕ ಬಳಸಿಕೊಂಡಿದೆ ಎಂದು ಪ್ರಮಾಣಪತ್ರದಲ್ಲಿ ಹಾಡಿಹೊಗಳಲಾಗಿದೆ.
ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ, 5,800 ಹೊಸ ಬಸ್‌ಗಳನ್ನು ಸೇರಿಸಲಾಗಿದೆ, 10,000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಮತ್ತು ಸಾಲ ತೀರಿಸಲು ರಾಜ್ಯ ಸರ್ಕಾರವು 2,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಸಾರಿಗೆ ನಿಗಮಗಳಲ್ಲಿ ಹಲವಾರು ರಚನಾತ್ಮಕ ಸುಧಾರಣೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.