ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮತ್ತು ಬೆದರಿಕೆಯೊಡ್ಡಿದ್ದ ಆರೋಪದಡಿ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಮೂಲದ ಆದರ್ಶ್ ಮತ್ತು ಸಂಜಯ್ ಎಂದು ಗುರುತಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇದೇ ಪ್ರಕರಣದಲ್ಲಿ ಆಗಸ್ಟ್ 4ರಂದು ಭುವನ್ ಗೌಡ ಹಾಗೂ ರಾಜೇಶ್ ಎಂಬುವವರನ್ನು ಬಂಧಿಸಲಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ, 'ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಕಿರಣ ಇದ್ದಂತೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ' ಎಂದು ಬರೆದಿದ್ದರು.
ಇದರಿಂದ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಆರೋಪಿಗಳು ರಮ್ಯಾ ಅವರನ್ನು ನಿಂದಿಸಿದ್ದರು. ಅಶ್ಲೀಲವಾಗಿ ಕಮೆಂಟ್ ಮಾಡುವುದಲ್ಲದೆ, ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ಕಳುಸಿಹಿಸಿದ್ದರು. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಜುಲೈ 28ರಂದು ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು.