ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಘೋಷಿಸಿ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ. ಮಹಾದೇವಪ್ಪ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಚಿವರು, ಪರಿಶಿಷ್ಟ ಜಾತಿ ಸಮುದಾಯಗಳ ಸುದೀರ್ಘ ಬೇಡಿಕೆಗೆ ಅನುಗುಣವಾಗಿ ನಮ್ಮ ಸರ್ಕಾರವು ಸೂಕ್ತವಾಗಿ ಚಿಂತಿಸಿ ಚುನಾವಣಾ ಪ್ರಣಾಳಿಕೆಯಲ್ಲಿ ನುಡಿದಂತೆ ಒಳ ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುವ ನಿರ್ಣಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇಂತಹ ಮಹತ್ವದ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಇದರಿಂದ ಶೋಷಿತ ಸಮುದಾಯಗಳು ಐಕ್ಯತೆಯಿಂದ ಹೆಜ್ಜೆ ಇಡಬೇಕಾದ ಜವಾಬ್ದಾರಿಯು ಸಹಜವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದಲಿತ ಸಮುದಾಯಕ್ಕೆ ಒಳ ಮೀಸಲಾತಿ ಬಹುತೇಕ ಅಂತಿಮವಾಗಿದೆ. ಎಲ್ಲಾ ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನವಾಗಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ 5 ವಿಂಗಡಣೆ ಮಾಡಲಾಗಿತ್ತು. ಆದರೆ ಸರ್ಕಾರ ಇದನ್ನು 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. ಅದರಂತೆ 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇಕಡ 6ರಷ್ಟು ಮೀಸಲಾತಿ ಹಾಗೂ 20 ಜಾತಿಗಳಿರುವ ಬಲಗೈ ಸಮುದಾಯಕ್ಕೆ ಶೇಕಡ 6ರಷ್ಟು ಮೀಸಲಾತಿ. ಇನ್ನು 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇಕಡ 5ರಷ್ಟು ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಅಂತಿಮವಾಗಿದೆ.