ಬೆಂಗಳೂರು: ನಗರದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 5.50 ಕೋಟಿ ಮೌಲ್ಯದ ನೈಸರ್ಗಿಕ ಹಾಗೂ ಸಿಂಥೆಟಿಕ್ ಡ್ರಗ್ಸ್ ಅನ್ನು ಜಪ್ತಿ ಮಾಡಿ ಆಫ್ರಿಕಾ ಮೂಲಕ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್ಆರ್ ಲೇಔಟ್, ಕೋರಮಂಗಲ, ಸಂಪಿಗೆಹಳ್ಳಿ, ಯಲಹಂಕ ಠಾಣೆ ಪೊಲೀಸರು ಹಾಗೂ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ್ದು, ಆಫ್ರಿಕಾದ ಪ್ರಜೆ ಜೋಯಲ್ ಕಬಾಂಗ್ (28), ಮೂರು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಈತನ ಸ್ನೇಹಿತೆ ಜೋಯ್ ಸಂಡೇ (22) ಎಂಬುವವರನ್ನು ಬಂಧಿಸಿದ್ದಾರೆ.
ಆ.15ರ ಸಂಜೆ ಬೆಟ್ಟದಾಮಸಪುರದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅವರಿಂದ 2.150 ಕೆಜಿ ಎಂಡಿಎಂಎ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಜೋಯಲ್ ಕಾಬೊಂಗ್ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದ ಅಡಿ ಭಾರತಕ್ಕೆ ಬಂದಿದ್ದ. ಜೋಯ್ ಸಂಡೆ ಸಹ ವಿದ್ಯಾರ್ಥಿ ವೀಸಾ ಪಡೆದು ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ಇಬ್ಬರ ವೀಸಾದ ಅವಧಿ ಅಂತ್ಯವಾದ ಬಳಿಕವೂ ಬೆಂಗಳೂರಿನಲ್ಲೇ ಉಳಿದಿದ್ದರು. ಇಬ್ಬರೂ ಅಕ್ರಮವಾಗಿ ನೆಲಸಿ, ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ನೈಜೀರಿಯಾ ಮೂಲದ ಆ್ಯಂಗಲೊನಾ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ನಗರದಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಆಫ್ರಿಕಾದ ಆರೋಪಿ ಜಾನ್ ಡಿ ಕೊಸ್ಟಾ ಎಂಬಾತನನ್ನು ಸಿಸಿಬಿಯ ಮಾದಕ ಪದಾರ್ಥ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
2024ರಲ್ಲಿ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ಆರಂಭದಲ್ಲಿ ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದ. ಬಳಿಕ ಬೆಂಗಳೂರಿಗೆ ಬಂದು ಆವಲಹಳ್ಳಿ ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರದ ಜೊತೆಗೆ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿದ್ದ. ಆರೋಪಿಯಿಂದ ರೂ40 ಲಕ್ಷ ಮೌಲ್ಯದ 255 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಏತನ್ಮಧ್ಯೆ, ಉತ್ತರ ವಿಭಾಗದ ಪೊಲೀಸರು ಮಾದಕವಸ್ತು ಮಾರಾಟದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮೂವರು ಅಂತರರಾಜ್ಯ ಆರೋಪಿಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಅವರಿಂದ 18 ಲಕ್ಷ ರೂ. ಮೌಲ್ಯದ 140 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.