ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ದೊರೆಯಿತು. ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕ ಇದಾಗಿದೆ.
ಅಕ್ರಮ ಗಣಿಗಾರಿಕೆಯ ಆಸ್ತಿ ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಮಸೂದೆ 2005, ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಪಡೆದ ಆಸ್ತಿಗಳನ್ನು ವಶಪಡಿಸಿಕೊಳ್ಳಲು, ಜಪ್ತಿ ಮಾಡಲು ಆಯುಕ್ತರ ನೇಮಕಕ್ಕೆ ಅವಕಾಶ ನೀಡುತ್ತದೆ. ವಸೂಲಾತಿ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಕಮಿಷನರ್ ಆಗಿ ನೇಮಿಸಲಾಗುತ್ತದೆ.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಾರ್ಕಿಕ ಘಟ್ಟಕ್ಕೆ ಕೊಂಡೊಯ್ಯುವಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕುರಿತು ಕಾನೂನು ಸಚಿವ ಎಚ್. ಕೆ. ಪಾಟೀಲ್ ಜೂನ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಸಚಿವ ಎಚ್. ಕೆ. ಪಾಟೀಲ್ ಮಂಡಿಸಿದರು.
2006 ರಿಂದ 2012ರ ವರೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವ್ಯವಹಾರ ನಡೆದಿದೆ. ಇದರ ಬಗ್ಗೆ ಲೋಕಾಯುಕ್ತ ವರದಿ ನೀಡಿದ್ದಾರೆ. ಸಚಿವ ಸಂಪುಟ ಸಭೆಯ ವರದಿ ಕೂಡ ಇದೆ. ಹೀಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕವನ್ನು ಮಂಡಿಸುತ್ತಿದ್ದೇವೆ. ರಾಜ್ಯದ ಹಿತಾದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.
ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿ ವಿಧೇಯಕ: ರಾಜ್ಯದಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳಿಗೆ ಕ್ಷೇಮಾಭಿವೃದ್ಧಿ ಕ್ರಮ ಹಾಗೂ ಅವರ ವಿರುದ್ಧ ದೌರ್ಜನ್ಯಗಳ ಅಪರಾಧ ಎಸಗುವುದನ್ನು ತಡೆಗಟ್ಟುವ ಉದ್ದೇಶವುಳ್ಳ 2025ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ(ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ವಿಧೇಯಕ ಮಂಡಿಸಿ ಮಾತನಾಡಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ರಾಜ್ಯದಲ್ಲಿ 15 ಸಾವಿರ ಕುರಿಗಾಹಿಗಳಿದ್ದು, 5,000 ಕುರಿಗಾಹಿಗಳು ನೋಂದಣಿಯಾಗಿದ್ದು, ಅವರಿಗೆ ಗುರುತಿನ ಚೀಟಿ ನೀಡಲಾಗಿದೆ. ಮೂರು ವರ್ಷದಲ್ಲಿ 242 ಕುರಿಗಾಹಿಗಳ ದೌರ್ಜನ್ಯಕ್ಕೆ ಸಂಬಂಧಿಸಿದ ಕೇಸುಗಳು ದಾಖಲಾಗಿವೆ. ಅವರು ವಲಸೆ ಹೋದಾಗ ಕುರಿತು ಹೊತ್ತುಕೊಂಡು ಹೋಗುವುದು, ದೌರ್ಜನ್ಯ ನಡೆಸುವುದು, ಅತ್ಯಾಚಾರ ಎಸಗುವ ಕೃತ್ಯಗಳು ಜರುಗಿವೆ. ಹೀಗಾಗಿ, ಇಂತಹವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
2025ನೇ ಸಾಲಿನ ಕರ್ನಾಟಕ ಲಿಫ್ಟ್ಗಳು, ಎಕ್ಸಲೇಟರ್‌ಗಳು ಮತ್ತು ಪ್ಯಾಸೆಂಜರ್ ಕನ್ವೆಯರ್‌ಗಳ(ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ಸಚಿವ ಕೆ.ಜೆ. ಜಾರ್ಜ್ ವಿಧೇಯಕವನ್ನು ಮಂಡಿಸಿದರು. ಈ ತಿದ್ದುಪಡಿ ವಿಧೇಯಕದಿಂದ ಲಿಫ್ಟ್ಗಳ, ಎಕ್ಸಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೆಯರ್‌ಗಳ ಮುಖ್ಯ ತಪಾಸಣಾಧಿಕಾರಿ ಬದಲಿಗೆ ಪ್ರಾಧಿಕೃತ ಅಧಿಕಾರಿ ಎಂಬ ತಿದ್ದುಪಡಿ ತರಲಾಗಿದೆ. ಈ ವಿಧೇಯಕಕ್ಕೆ ಚರ್ಚೆ ಇಲ್ಲದೆ ಅನುಮೋದನೆ ದೊರೆಯಿತು.
2025ನೇ ಸಾಲಿನ ಬಸನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕಕ್ಕೂ ವಿಧಾನಸಭೆ ಅನುಮೋದನೆ ನೀಡಿತು. ಬುಧವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2025ನ್ನು ವಿಧಾನಸಭೆಯಲ್ಲಿ ಮತ್ತೊಮ್ಮೆ ಅಂಗೀಕರಿಸಲಾಯಿತು.