ಮಹದೇವಪ್ಪ 
ರಾಜ್ಯ

SCP/TSP ನಿಧಿಯಿಂದ 13,433 ಕೋಟಿ ರೂ ಗ್ಯಾರಂಟಿ ಯೋಜನೆಗಳಿಗಾಗಿ ಬಳಕೆ: ಸಚಿವ ಎಚ್‌.ಸಿ ಮಹದೇವಪ್ಪ

ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಜನೆಯ ಸೆಕ್ಷನ್-7 ‘ಸಿ’ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆಗೆ ಅವಕಾಶವಿದೆ. ಅದರಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡಿದ್ದೇವೆ.

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ 2025- 26 ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನದಲ್ಲಿ 13,433 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಅವರು ಬುಧವಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು, ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಜನೆಯ ಸೆಕ್ಷನ್-7 ‘ಸಿ’ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆಗೆ ಅವಕಾಶವಿದೆ. ಅದರಂತೆ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡಿದ್ದೇವೆ. ಎಲ್ಲಾ ಯೋಜನೆಗಳಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಪಟ್ಟಿ ನೀಡದೆ ಇದ್ದರೆ ಉಪಯೋಜನೆಯ ಹಣ ಹಿಂಪಡೆಯಲಾಗುವುದು’ ಎಂದು ಹೇಳಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅಡಿ 42,017.51 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ. 2025ರ ಅಂತ್ಯಕ್ಕೆ 8,459 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲೇ ಶೇ.24ರಷ್ಟು ಹಣವನ್ನು ಮೀಸಲಿಡಲಾಗುತ್ತಿದೆ. 2025-26ನೇ ಸಾಲಿನಲ್ಲಿ ಗೃಹಲಕ್ಷಿ-7,438ಕೋಟಿ ರೂ., ಅನ್ನಭಾಗ್ಯ-1,670 ಕೋಟಿ ರೂ. ಗೃಹಜ್ಯೋತಿ-2626 ಕೋಟಿ ರೂ., ಶಕ್ತಿ ಯೋಜನೆ-1,537 ಕೋಟಿ ರೂ. ಹಾಗೂ ಯುವನಿಧಿಗೆ 162 ಕೋಟಿ ರೂ.ಸೇರಿ 13,433 ಕೋಟಿ ರೂ.ಬಳಕೆ ಮಾಡಲಾಗಿದೆ ಎಂದು ವಿವರ ನೀಡಿದರು.

ಎಲ್ಲ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಯಿಂದಲೇ ಹಂಚಿಕೆ ಮಾಡಬೇಕು ಎಂದು ವಿಪಕ್ಷ ಸದಸ್ಯರು ಸಲಹೆ ನೀಡಿದ್ದು, ಇದು ಒಳ್ಳೆಯ ಸಲಹೆಯಾಗಿದೆ. ಆದರೆ, ಆಯಾ ಇಲಾಖೆಗಳಲ್ಲೂ ಕೆಲಸ-ಕಾರ್ಯಗಳು ನಡೆಯಬೇಕು. ಹೀಗಾಗಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಹಣಕಾಸು ಸೌಲಭ್ಯಗಳು ಹಾಗೆಯೆ ಮುಂದುವರಿಯಲಿವೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ ಅವರು, ಬಜೆಟ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ 42,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಆದರೆ, ಇಲ್ಲಿಯವರೆಗೆ ಕೇವಲ 7,000 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನು ಇತರ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ನನ್ನ ಕ್ಷೇತ್ರದಲ್ಲಿ, ಬೋರ್‌ವೆಲ್‌ಗಳನ್ನು ಕೊರೆಯಲು ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಂದ 45,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಆದರೆ, ರಾಜ್ಯ ಸರ್ಕಾರವು ಕೇವಲ ಒಬ್ಬ ಫಲಾನುಭವಿಗೆ ಮಾತ್ರ ಅನುಮೋದನೆ ನೀಡಿದೆ. ಈ ರೀತಿ ನೀವು ಹಣವನ್ನು ಬೇರೆಡೆಗೆ ತಿರುಗಿಸುತ್ತಿದ್ದರೆ ನಮಗೆ ಇತರ ಯೋಜನೆಗಳಿಗೆ ಹಣ ಸಿಗುವುದಿಲ್ಲ ಎಂದು ಹೇಳಿದರು.

ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ಮಾತನಾಡಿ, 2025-26ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ SCP/TSP ನಿಧಿಯಿಂದ 13,400 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ SCP/TSP ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಕಾಯ್ದೆಯ ಪ್ರಕಾರ, SCP/TSP ನಿಧಿಗಳನ್ನು ಸಾಮಾನ್ಯ ಯೋಜನೆಗಳಿಗೆ ಬಳಸಲಾಗುವುದಿಲ್ಲ. ಅದನ್ನು ಸಾಮಾನ್ಯ (ಖಾತರಿ) ಯೋಜನೆಗಳಿಗೆ ಹೇಗೆ ಬಳಸಿದ್ದೀರಿ. ಶಕ್ತಿ ಯೋಜನೆಗೆ 1,500 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ನೀವು ಹೇಳಿದ್ದೀರಿ, ಬಸ್‌ನಲ್ಲಿ ಪ್ರಯಾಣಿಸುವ ಜನರಲ್ಲಿ SC/ST ಎಂದು ನೀವು ಹೇಗೆ ಪ್ರತ್ಯೇಕಿಸುತ್ತೀರಿ?" ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ ಅವರು, ಈ ನಿಧಿಯಿಂದ ಗ್ಯಾರಂಟಿ ಯೋಜನೆಯ ಪ್ರಯೋಜನಗಳನ್ನು ಪಡೆದ ಫಲಾನುಭವಿಗಳ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಮೊತ್ತವನ್ನು ಎಸ್‌ಸಿ/ಎಸ್‌ಟಿ ಅಲ್ಲದ ಫಲಾನುಭವಿಗಳಿಗೆ ಬಳಸಿದ್ದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆಯಡಿಯಲ್ಲಿ, ಒಟ್ಟು ಬಜೆಟ್‌ನ ಶೇ. 24.1 ರಷ್ಟು ಹಣವನ್ನು ಸಮುದಾಯಕ್ಕೆ ಮೀಸಲಿಡಲಾಗಿದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳ ಮೂಲಕ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಅನುಕೂಲವಾಗುವಂತೆ 34 ಸರ್ಕಾರಿ ಇಲಾಖೆಗಳಿಗೆ ಹಣವನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರವು ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಇಲಾಖೆಗಳ ಮೂಲಕ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಈ ಹಣವನ್ನು ಯೋಜನೆಗಳ ಮೂಲಕ ನೀಡಲು ಅವಕಾಶ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ, ಏಕ-ಗವಾಕ್ಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು, ಅದರ ಮೂಲಕ ಈ ಸಮುದಾಯದ ಸದಸ್ಯರಿಗೆ ಹಣವನ್ನು ಬಳಸಲಾಗುವುದು. ಹಣವನ್ನು ಈ ಸಮುದಾಯಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT