ಹುಬ್ಬಳ್ಳಿ: ಫೋಟೋಗಾಗಿ ಕಾಳಿಂಗ ಸರ್ಪವನ್ನು ಅಕ್ರಮವಾಗಿ ಸೆರೆ ಇಟ್ಟುಕೊಂಡಿದ್ದ ಅಂತರರಾಜ್ಯ ಜಾಲವನ್ನು ರಾಜ್ಯ ಅರಣ್ಯಾಧಿಕಾರಿಗಳು ಭೇದಿಸಿದ್ದಾರೆ. ಹಾವಿನ ಜೊತೆ ಫೋಟೋ ಮತ್ತು ವೀಡಿಯೋ ತೆಗೆದುಕೊಳ್ಳಲು ಸಾವಿರಾರು ರೂಪಾಯಿ ಹಣ ಪಡೆಯಲಾಗುತ್ತದೆ.
ಅನುಮತಿಯಿಲ್ಲದೆ ಕಾಳಿಂಗ ಸರ್ಪವನ್ನು ನಿರ್ವಹಿಸುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೊಡಗಿನ ಅರಣ್ಯ ಮೊಬೈಲ್ ಸ್ಕ್ವಾಡ್ (ಎಫ್‌ಎಂಎಸ್) ನ ತನಿಖಾಧಿಕಾರಿಗಳು ಮಹಾರಾಷ್ಟ್ರದ ವಿಕಾಸ್ ಜಗ್ತಾಪ್ ಮತ್ತು ಜನಾರ್ದನ್ ಭೋಸಲೆ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯವಾಗಿ ರಕ್ಷಿಸಲಾದ ಕಾಳಿಂಗ ಸರ್ಪದ ಛಾಯಾಚಿತ್ರ ತೆಗೆಯಲು ಇಬ್ಬರು ಈ ತಿಂಗಳ ಆರಂಭದಲ್ಲಿ ಕೊಡಗಿಗೆ ಭೇಟಿ ನೀಡಿದ್ದರು. ಕಾಳಿಂಗ ಸರ್ಪ ಮತ್ತು ಸ್ಥಳದ ಕುರಿತು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಆಧಾರದ ಮೇಲೆ ಅವರನ್ನು ಎಫ್‌ಎಂಎಸ್ ತನಿಖಾಧಿಕಾರಿಗಳು ಹಿಂಬಾಲಿಸುತ್ತಿದ್ದರು,
ಈ ವೇಳೆ ಅವರಿಬ್ಬರು ಕೊಡಗಿನಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿತು , ಆದರೆ ಅಲ್ಲಿಗೆ ಅಧಿಕಾರಿಗಳು ತೆರಳುವ ಕೆಲವು ಗಂಟೆಗಳ ಹಿಂದೆ ಇಬ್ಬರು ಅಲ್ಲಿಂದ ಹೊರಟುಹೋಗಿದ್ದರು. ಈ ಜೋಡಿ ತಮ್ಮ ಖಾಸಗಿ ಕಾರಿನಲ್ಲಿ ಕಾಳಿಂಗ ಸರ್ಪವನ್ನು ಹೊತ್ತೊಯ್ಯುತ್ತಿದ್ದಾರೆ ಎಂಬ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿತ್ತು.
ಹೀಗಾಗಿ ಕೊಡಗಿನ ಎಫ್‌ಎಂಎಸ್ ಅಧಿಕಾರಿಗಳು ಬೆಳಗಾವಿ ತಂಡಕ್ಕೆ ಎಚ್ಚರಿಕೆ ನೀಡಿತು, ಬೆಳಗಾವಿ ಅಧಿಕಾರಿಗಳು ಅದೇ ಸಂಜೆ ಕಾರನ್ನು ವಶಪಡಿಸಿಕೊಂಡರು. ಅವರ ಬಳಿ ಯಾವುದೇ ಹಾವು ಇರದ ಕಾರಣ ಇಬ್ಬರನ್ನು ಬಿಡುಗಡೆ ಮಾಡಲಾಯಿತು. ಆದರೆ ಅವರ ಮೊಬೈಲ್ ನಲ್ಲಿ ಕಾಳಿಂಗ ಸರ್ಪಗಳೊಂದಿಗೆ ಹಲವು ಮಂದಿ ಪೋಸ್ ನೀಡುತ್ತಿರುವ ಡಜನ್ಗಟ್ಟಲೆ ಫೋಟೋಗಳು ಸಿಕ್ಕಿ ಬಿದ್ದವು. ಹೀಗಾಗಿ ಅವರನ್ನು ಕೊಡಗಿಗೆ ವಾಪಸ್ ಬರುವಂತೆ ಸೂಚಿಸಲಾಯಿತು, ಆದರೆ ಇಬ್ಬರು ಗಮನ ಕೊಡದೆ ಪರಾರಿಯಾಗಿದ್ದಾರೆ. ಗುರುವಾರ ಕೊಡಗು ಅರಣ್ಯಾಧಿಕಾರಿಗಳು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಇಬ್ಬರ ಬಂಧನಕ್ಕಾಗಿ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಸಹಾಯ ಕೋರಿದೆ.
ಅರಣ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ರಕ್ಷಿಸಲ್ಪಟ್ಟ ಕಾಳಿಂಗ ಸರ್ಪವನ್ನು ಸೆರೆಯಲ್ಲಿ ಇಡುವುದು ಹಾವಿನ ಮೇಲೆ ಒತ್ತಡವನ್ನುಂಟುಮಾಡುತ್ತದೆ. ಕಾಳಿಂಗ ಸರ್ಪಗಳೊಂದಿಗೆ ಫೋಟೋ ತೆಗೆದುಕೊಳ್ಳಲು ಸಹಾಯ ಮಾಡಬಹುದಾದ ಕೆಲವು ಸ್ಥಳೀಯ ಹಾವು ರಕ್ಷಕರನ್ನು ನಾವು ಗುರುತಿಸಿದ್ದೇವೆ. ನಾವು ಅವರನ್ನು ವಿಚಾರಣೆ ಮಾಡಿದ ನಂತರ ನಾವು ದಂಧೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಕೆಲವು ವರ್ಷಗಳ ಹಿಂದೆ ಪುಣೆಯಲ್ಲಿ ಕಾಳಿಂಗ ಸರ್ಪಗಳ ಅಕ್ರಮ ನಿರ್ವಹಣೆ ಮತ್ತು ಸಾಗಣೆ ವರದಿಯಾಗಿತ್ತು. ಕಾಳಿಂಗ ಸರ್ಪಗಳ ಜೊತೆ ಫೋಟೋ ತೆಗೆದುಕೊಳ್ಳಲು 4,000 ರೂ.ಗೆ ಚಾರ್ಜ್ ಮಾಡಲಾಗುತ್ತಿತ್ತು ಎಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವನ್ಯಜೀವಿ ವಾರ್ಡನ್ ರೋಹನ್ ಭಾಟೆ ಹೇಳಿದರು.
ಕಾಳಿಂಗ ಸರ್ಪಗಳಂತಹ ಜಾತಿಯ ಹಾವುಗಳನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ರಕ್ಷಿಸಬೇಕು, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಲೈಕ್‌ಗಳು ಮತ್ತು ವೀಕ್ಷಣೆಗಳಿಗಾಗಿ ಹಾವುಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.