ಹೊಸಪೇಟೆ: ವಿಜಯನಗರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿರುವ ವಿಜಯನಗರದ ಒಬ್ಬ ವಿದ್ಯಾರ್ಥಿನಿ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ತೋರಿಸಿದ್ದಾಳೆ. ಪೋಷಕರು ಏರ್ಪಡಿಸಿದ ಬಾಲ್ಯ ವಿವಾಹ ಪ್ರಸ್ತಾವನೆಯನ್ನು ನಿರಾಕರಿಸುವ ಮೂಲಕ ಮಾದರಿಯಾಗಿದ್ದಾಳೆ.
ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದಾಗ, ಹೂವಿನ ಹಡಗಲಿಯಲ್ಲಿ ವಾಸಿಸುವ ಬಾಲಕಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿದ್ದಳು. ಇತ್ತೀಚೆಗೆ ಆಕೆ ತನ್ನ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಳು ಹಾಗೂ ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿದುಕೊಂಡಳು.
ಬಾಲಕಿಯ ಕರೆಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಆಕೆಯ ಮನೆಗೆ ಭೇಟಿ ನೀಡಿದರು. ಅವರು ಮಧ್ಯಪ್ರವೇಶಿಸಿ, ಪೋಷಕರಿಗೆ ಸಲಹೆ ನೀಡಿ ಮದುವೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ನೋಡಿಕೊಂಡರು.
ಅಂತಹ ಯಾವುದೇ ಪ್ರಯತ್ನವನ್ನು ಪುನರಾವರ್ತಿಸದಂತೆ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದರು. ವಿಜಯನಗರ ಜಿಲ್ಲಾಡಳಿತ ಮತ್ತು ಪೊಲೀಸರು ಬಾಲ್ಯ ವಿವಾಹ ತಡೆಗಟ್ಟುವಿಕೆಯ ಕುರಿತು ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವಿಜಯನಗರದ ಉಪ ಆಯುಕ್ತ (ಡಿಸಿ) ಎಂ.ಎಸ್. ದಿವಾಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ನಾವು ಹೈಯರ್ ಸೆಕೆಂಡರಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹುಡುಗಿಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಬಾಲ್ಯವಿವಾಹಗಳ ಬಗ್ಗೆ ಆಶಾ ಮತ್ತು ಅಂಗನವಾಡಿ ಸಿಬ್ಬಂದಿಗೆ ನಿಗಾ ಇಡಲು ತಿಳಿಸಲಾಗಿದೆ" ಎಂದು ಡಿಸಿ ಹೇಳಿದರು.