ತುಮಕೂರು: ಕೋಟ್ಯಾಂತರ ಭಕ್ತರ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಪಾಪದ ಕೃತ್ಯಗಳಿಗೆ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರೇ ಕಾರಣ, ಈ ಪಾಪದ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆದಿದೆ ಎನ್ನಲಾದ ವಿಷಯವು ಭವಿಷ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಕೋಮುವಾದಿ, ಎಡಪಂಥೀಯರ ಮಾತು ಕೇಳಿಕೊಂಡು ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳದ ವಿರುದ್ಧ ತನಿಖೆಗೆ ಸೂಚಿಸಿದರು. ಈ ಮೂಲಕ ದೇಶ-ವಿದೇಶದಲ್ಲಿನ ಮಂಜುನಾಥ ಸ್ವಾಮಿಯ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಐತಿಹ್ಯ ಕ್ಷೇತ್ರವಾದ ಧರ್ಮಸ್ಥಳ ಭಕ್ತರಿಗೆ ನೆಮ್ಮದಿ ಮತ್ತು ಶಾಂತಿಯನ್ನು ಕೊಟ್ಟ ಪವಿತ್ರ ಪ್ರದೇಶವಾಗಿದೆ. ಯಾರೋ ಮಾಡಿದ ಆರೋಪಗಳಿಗೆ ಕಿವಿಕೊಟ್ಟು, ಪಾವಿತ್ರ್ಯ ಕ್ಷೇತ್ರಕ್ಕೆ ಕಳಂಕ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಕಶಾಸ್ತಿ ಅನುಭವಿಸಲಿದ್ದಾರೆಂದು ಕಿಡಿಕಾರಿದರು.
ಯಾರೋ ಪೌರಕಾರ್ಮಿಕನೊಬ್ಬ ಧರ್ಮಸ್ಥಳ ಕ್ಷೇತ್ರದ ಮೇಲೆ ಆರೋಪ ಮಾಡಿದಾಗ, ದೆಹಲಿಯಲ್ಲಿ ನಾನು ಕೆಲವರಿಗೆ ಇದೆಲ್ಲವೂ ಸುಳ್ಳು. ಕ್ಷೇತ್ರದ ಬಗ್ಗೆ ಅಪಪ್ರಚಾರ ಮತ್ತು ತನಿಖೆ ಮಾಡಬೇಕಿಲ್ಲ ಎಂದು ಬುದ್ಧಿವಾದ ಹೇಳಿದ್ದೆ. ಆದರೆ, ಅದು ನಡೆಯಿತು. ಸುಳ್ಳನ್ನೇ ಸತ್ಯವೆಂದು ಬಿಂಬಿಸಿದರು. ಇಂತಹ ಪಾಪದ ಕೃತ್ಯ ದೇಶದಲ್ಲಿ ನಡೆದಾಗ ಸತ್ಯಕ್ಕೆ ಎಂದೂ ಕೂಡ ಮನ್ನಣೆ ತಪ್ಪುವುದಿಲ್ಲ. ಭಾರತಾಂಬೆ ಅದಕ್ಕೆ ದಾರಿ ತೋರಿಸುತ್ತಾಳೆ ಎಂಬ ನಂಬಿಕೆ ಇತ್ತು ಎಂದರು.
ದೇವರು ಇದ್ದಾನೆ. ದೇಶಕ್ಕೆ ಇತಿಹಾಸವಿದೆ. ಘಜನಿ ಮಹ್ಮದ್ ಭಾರತದ ಮೇಲೆ ಹಲವು ಬಾರಿ ದಂಡೆತ್ತಿ ಬಂದರೂ ಏನೂ ಆಗಲಿಲ್ಲ. ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರು ಈ ದೇಶದ ಸ್ಥಿರತೆಯನ್ನು ಕಾಪಾಡಿದ್ದಾರೆ. ಪಾಪ ಅಧಿಕಾರಿಗಳು ಏನು ಮಾಡಲು ಆಗುವುದಿಲ್ಲ. ಅವರಿಗೂ ಸತ್ಯ ಗೊತ್ತಾಗಿದೆ. ಇದೆಲ್ಲವೂ ಸುಳ್ಳು, ವ್ಯವಸ್ಥಿತವಾದ ಷಡ್ಯಂತ್ರ ಎಂದು ಇದೆಲ್ಲಕ್ಕೂ ತೆರೆ ಎಳೆಯುವ ಸಮಯ ಬಂದಿದೆ. ಸಿದ್ದರಾಮಯ್ಯ ರಾಜ್ಯದ ಜನರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಮೊದಲು ಅವರು ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಎರಡು ದಿನ ಇದ್ದು, ಪ್ರಾಯಶ್ಚಿತಕ್ಕೋಸ್ಕರವಾದ್ರೂ ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪಸ್ವಾಮಿಯ ದರ್ಶನ ಮಾಡಲಿ. ಕ್ಷಮಿಸು ಎಂದು ಕೇಳಿಕೊಂಡು ಬರಲಿ. ಇದು ರಾಜ್ಯಕ್ಕೂ ಮತ್ತು ಅವರಿಗೂ ಒಳ್ಳೆಯದು ಎಂದು ಸಲಹೆ ನೀಡಿದರು.