ಬೆಂಗಳೂರು: ರಸ್ತೆ ಬದಿಗಳಲ್ಲಿ ಕಸ ಸುರಿಯುವವರಿಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆಯ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು ಪರಿಷ್ಕರಣೆ ಮಾಡಿದೆ.
ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ ಸಮಯವನ್ನು ಬೆಳಿಗ್ಗೆ 5:30ಕ್ಕೆ ನಿಗದಿಪಡಿಸಲಾಗಿದೆ.
ಈ ಹಿಂದೆ ಬೆಳಿಗ್ಗೆ 6 ರಿಂದ 7:30 ರವರೆಗೆ ಘನತಾಜ್ಯ ಸಂಗ್ರಹಣೆ ಮಾಡಲಾಗುತ್ತಿತ್ತು. ಆದರೆ ಈಗ ಒಂದು ಗಂಟೆ ಮುಂಚಿತಗೊಳಿಸುವ ಮೂಲಕ ತ್ಯಾಜ್ಯ ಸಂಗ್ರಹಣೆಯನ್ನು ಜನರ ದೈನಂದಿನ ಕಾರ್ಯವೈಖರಿಯ ಜೊತೆಗೆ ಹೊಂದುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಬದಲಾವಣೆಯ ಮೂಲಕ ನಿವಾಸಿಗಳು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ನೀಡಲು ಅನುಕೂಲವಾಗುವುದರ ಜೊತೆಗೆ, ಸಾರ್ವಜನಿಕರಿಂದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರಕರಣ ಮತ್ತು ಕಪ್ಪು ಚುಕ್ಕಿ (Black Spot) ಗಳು ರೂಪುಗೊಳ್ಳುವುದನ್ನು ತಡೆಗಟ್ಟಲಾಗುವುದು.
ಈ ಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾರ್ವಜನಿಕರ ಸಹಕಾರವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ಅವರು ಕೋರಿದ್ದಾರೆ.
ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ನಗರದ ವಿವಿಧ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುವ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ಬ್ಯಾಪ್ಟಿಸ್ಟ್ ಆಸ್ಪತ್ರೆ, ಹೊಸೂರು ರಸ್ತೆ, ಮಾಗಡಿ ರಸ್ತೆ, ನಾಗರಭಾವಿ ಮುಖ್ಯ ರಸ್ತೆ, ಮೈಸೂರು ರಸ್ತೆ, ಟಿನ್ ಫ್ಯಾಕ್ಟರಿ, ಬೆಳ್ಳಂದೂರು ಮತ್ತು ಸಿಂಗಸಂದ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿನ 77 ಸ್ಕೈವಾಕ್‌ಗಳಲ್ಲಿ ಬಿಬಿಎಂಪಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಿದ್ದು, ಜನರು ಎಲ್ಲೆಂದರಲ್ಲಿ ಉಗುಳಬಾರದು, ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳನ್ನು ಬಿಸಾಡಬಾರದು ಮತ್ತು ಸ್ಕೈವಾಕ್‌ಗಳಲ್ಲಿ ಯಾವುದೇ ಪೋಸ್ಟರ್‌ಗಳನ್ನು ಅಂಟಿಸಬಾರದು ಎಂದು ಮನವಿ ಮಾಡಿದೆ.