ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ರಚನೆಗೆ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಇದು ಸೆಪ್ಟೆಂಬರ್ 2, 2025 ರಿಂದ ಅಸ್ತಿತ್ವಕ್ಕೆ ಬರಲಿದೆ. ಅಧಿಸೂಚನೆಯ ಪ್ರಕಾರ, GBA 75 ಸದಸ್ಯರನ್ನು ಹೊಂದಿರುತ್ತದೆ. ಮುಖ್ಯಮಂತ್ರಿ ಅದರ ಅಧ್ಯಕ್ಷರಾದರೆ, ಉಪ ಮುಖ್ಯ ಮಂತ್ರಿ ಉಪಾಧ್ಯಕ್ಷರಾಗಿರುತ್ತಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆ ಅವರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಸೆಪ್ಟೆಂಬರ್ 2 ರಿಂದ ಅಸ್ತಿತ್ವ ಕಳೆದುಕೊಳ್ಳಲಿದೆ. ಆಗಸ್ಟ್ 26 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ, ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರಿರುತ್ತಾರೆ.
ಡಾ. ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ:
ಬಿಬಿಎಂಪಿ ಮುಖ್ಯ ಆಯುಕ್ತರು GBA ಮುಖ್ಯ ಆಯುಕ್ತರಾಗುತ್ತಾರೆ. ಬೆಂಗಳೂರಿನ ಸಚಿವರಾದ ಆರ್.ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಬಿ.ಜೆ.ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್ ಸೇರಿದಂತೆ ಬೆಂಗಳೂರು ನಗರವನ್ನು ಪ್ರತಿನಿಧಿಸುವ ನಾಲ್ವರು ಲೋಕಸಭಾ ಸದಸ್ಯರು, ಶಾಸಕರು ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್, ಜಯರಾಂ ರಮೇಶ್ ಸೇರಿದಂತೆ ಐವರು ರಾಜ್ಯಸಭಾ ಸದಸ್ಯರು ಮತ್ತು 11 ಮಂದಿ ವಿಧಾನಪರಿಷತ್ ಸದಸ್ಯರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಇವರಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರು, ನಗರ ಭೂ ಸಾರಿಗೆ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕರು, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ, ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧ್ಯಕ್ಷರು ಮತ್ತು ಐದು ಪಾಲಿಕೆಗಳ ಆಯುಕ್ತರು, ಉಪ ಆಯುಕ್ತರು, ನಗರ ಯೋಜನೆ ಮುಖ್ಯಸ್ಥರು ಮತ್ತು ಮುಖ್ಯ ಅಭಿಯಂತರರು ಕೂಡಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪದನಿಮಿತ್ತ ಸದಸ್ಯರಾಗಿದ್ದಾರೆ.
ಈ ಪಾಲಿಕೆಗಳಿಗೆ ಚುನಾವಣೆ ನಡೆದು ಮೇಯರ್‌ಗಳು ಆಯ್ಕೆಯಾದ ನಂತರ ಅವರನ್ನೂ ಜಿಬಿಎಗೆ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. GBA ತಂಡದ ಘೋಷಣೆಯೊಂದಿಗೆ, ಸೆಪ್ಟೆಂಬರ್ 10, 2020 ರಿಂದ ಚುನಾಯಿತ ಸಂಸ್ಥೆಯಿಲ್ಲದ ಬೆಂಗಳೂರಿಗೆ ಬಹು ನಿರೀಕ್ಷಿತ ಚುನಾವಣೆಗೆ ಸರ್ಕಾರ ಸಜ್ಜಾಗಿದೆ.
ಈ ಮಧ್ಯೆ ಈಗಿರುವ ಬಿಬಿಎಂಪಿ ಕೇಂದ್ರ ಕಟ್ಟಡದಲ್ಲಿ, ನೆಲ ಮಹಡಿಯಲ್ಲಿರುವ ಸಭಾಂಗಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದು ಬೆಂಗಳೂರು ಕೇಂದ್ರ ಮೇಯರ್ ಕಚೇರಿ ಎನ್ನಲಾಗುತ್ತಿದೆ. ಈ ಸಂಬಂಧ ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಬೆಂಗಳೂರು ಸೆಪ್ಟೆಂಬರ್ 2 ರಿಂದ ಬೃಹತ್ ಬೆಂಗಳೂರು ಪ್ರಾಧಿಕಾರವು ಜಾರಿಗೆ ಬರುತ್ತಿದ್ದಂತೆ ಹೊಸ ಆಡಳಿತದ ಯುಗವನ್ನು ಪ್ರವೇಶಿಸುತ್ತಿದೆ. ಐವರು ದಕ್ಷ ಆಯುಕ್ತರೊಂದಿಗೆ ಐದು ಹೊಸ ಪಾಲಿಕೆಗಳು ಆಡಳಿತವನ್ನು ಜನರಿಗೆ ಹತ್ತಿರ ತರಲಿವೆ. ಈ ವಿಕೇಂದ್ರೀಕರಣದಿಂದ ನಮ್ಮ ನಗರವು ತ್ವರಿತ ಅಭಿವೃದ್ಧಿ ಮತ್ತು ಸುಗಮ ಜೀವನಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದರು.
ಮುಂದೇನು? ಬೃಹತ್ ಬೆಂಗಳೂರು ಆಡಳಿತದ ಜಂಟಿ ಶಾಸಕಾಂಗ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರ ಪ್ರಕಾರ, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಒಳಗೊಂಡಂತೆ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಣೆ ಆಯೋಗವು ವಾರ್ಡ್‌ಗಳ ವಿಂಗಡಣೆ ಪ್ರಾರಂಭಿಸುತ್ತದೆ. ಇವೆಲ್ಲವನ್ನೂ 45 ದಿನಗಳಲ್ಲಿ ಪೂರ್ಣಗೊಳಿಸಿ ನವೆಂಬರ್ 1 ರಂದು ಚುನಾವಣಾ ಆಯೋಗಕ್ಕೆ ನೀಡಲಾಗುವುದು. ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಹೇಳಲು ಈ ಎಲ್ಲ ಕಸರತ್ತು ನಡೆಸಲಾಗುತ್ತಿದೆ ಎಂದು ತಿಳಿಸಿದರು.