ಬೆಂಗಳೂರು: ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಕಲಾಸಿಪಾಳ್ಯದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಸ್ಲಿಂಧರ್ ಕುಮಾರ್ ಎಂಬಾತ ಟ್ರಾವೆಲ್ಸ್ ಕಂಪನಿಯಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುತ್ತಿದ್ದು, ಈತನ ಮೇಲೆ ಆ.24 ರಂದು ರಾತ್ರಿ 9.30ರ ಸುಮಾರಿಗೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಕೇಸರಿ ಶಾಲು ಯಾಕೆ ಹಾಕಿಕೊಂಡಿದ್ದೀಯಾ ಎಂದು ಇಬ್ಬರು ಅಪರಿಚಿತ ಯುವಕರು ಸ್ಲಿಂಧರ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ,
ಈ ಸಂದರ್ಭದಲ್ಲಿ ಯಾಕೆ ಆತನ ಮೇಲೆ ಹಲ್ಲೆ ಮಾಡುತ್ತಿದ್ದೀರಾ ಎಂದು ತಡೆಯಲು ಬಂದ ಟ್ರಾವೆಲ್ಸ್ ಮಾಲೀಕನ ಮೇಲೂ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಕೇಸರಿ ಶಾಲು ಯಾಕೋ ಹಾಕಿದ್ದೀಯಾ? ಎಂದು ಬೈದು, ಬಟ್ಟೆ ಹರಿದು ಹಾಕಿದ್ದಾರೆಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ರಾಯಲ್ ಟ್ರಾವೆಲ್ಸ್ ಸಾರಿಗೆ ಕಚೇರಿಯ ವ್ಯವಸ್ಥಾಪಕ ಹರಿಕೃಷ್ಣ ಅವರು ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತನ್ನು ಮೆಕ್ಯಾನಿಕ್ ಆಗಿರುವ ನಾಗವಾರ ನಿವಾಸಿ ಎಂ. ತಬ್ರೇಜ್ (30), ರೇಡಿಯಂ ಕತ್ತರಿಸುವ ಕೆಲಸ ಮಾಡುತ್ತಿರುವ ಬನಶಂಕರಿ ನಿವಾರಿ ಡಬ್ಲ್ಯೂ. ಇಮ್ರಾನ್ ಖಾನ್ (35), ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಕೃಷ್ಣಪ್ಪ ಗಾರ್ಡನ್ ನಿವಾಸಿ ಅಜೀಜ್ ಖಾನ್ (37) ಎಂದು ಗುರ್ತಿಸಲಾಗಿದೆ.