ನವದೆಹಲಿ: ಮೈಸೂರು ಚಾಮುಂಡಿ ಬೆಟ್ಟದ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಕರ್ನಾಟಕ ಸರ್ಕಾರವನ್ನು ಅದರಲ್ಲೂ ನಿರ್ದಿಷ್ಟವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಚಾಮುಂಡಿಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಶಿವಕುಮಾರ್ ಹೇಳುತ್ತಾರೆ.
ಇತ್ತೀಚೆಗೆ ಅವರು ವಿಧಾನಸಭಾ ಆಧಿವೇಶನದಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಹಾಡಿ ವಿವಾದ ಸೃಷ್ಟಿಸಿದ್ದರು, ಆದರೆ ಅವರು ಹಾಗೆ ಮಾಡಿದ್ದು ದೆಹಲಿಯಲ್ಲಿರುವ ವರಿಷ್ಠರನನ್ನು ಕೆರಳಿಸಿತ್ತು ಎಂದು ಹೇಳಿದರು. ಹೈಕಮಾಂಡ್ ಗಮನ ಆ ವಿಷಯದಿಂದ ಬೇರೆಡೆ ಸೆಳೆಯಲು ಶಿವಕುಮಾರ್ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಅಂತ ಹೇಳಿದ್ದಾರೆ, ಅವರ ಮಾತಿನ ಅರ್ಥವೇನು ಎಂದು ಕಿಡಿಕಾರಿದ್ದಾರೆ.
ಚಾಮುಂಡಿ ತಾಯಿ ಈ ನಾಡಿನ ಹಿಂದೂಗಳ ಪಾಲಿನ ಅಧಿದೇವತೆ, ಪೂಜನೀಯಳು, ದಸರಾ ಸಮಯದಲ್ಲಿ ಚಾಮುಂಡಿಗೆ ಪೂಜೆ ಮಾಡಿಯೇ ಮುನ್ನುಡಿ ಇಡಲಾಗುತ್ತದೆ. ತಮ್ಮ ಹೈಕಮಾಂಡ್ ನ್ನು ಸಮಾಧಾನಗೊಳಿಸಲು, ಖುಷಿಪಡಿಸಲು ಡಿ ಕೆ ಶಿವಕುಮಾರ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.
ಹಿಂದೂ ಜನರ ಭಾವನೆಗಳಿಗೆ ತಮ್ಮ ಮಾತಿನ ಮೂಲಕ ನೋವುಂಟುಮಾಡಿರುವ ಡಿ ಕೆ ಶಿವಕುಮಾರ್ ಕ್ಷಮೆಯಾಚಿಸಬೇಕು ಎಂದರು.