ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಪಾಲ್ಗೊಳ್ಳಳು ಬಿಹಾರಕ್ಕೆ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿಗಳು ಬೆಳಿಗ್ಗೆ ಉತ್ತರ ಪ್ರದೇಶದ ಗೋರಖ್‌ಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದು, ರಸ್ತೆ ಮೂಲಕ ಬಿಹಾರದ ಗೋಪಾಲ್‌ಗಂಜ್‌ಗೆ ಪ್ರಯಾಣ ಬೆಳೆಸಿದರು.
'ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು' ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆ ತಿಳಿಸಿದೆ.
ಸಿದ್ದರಾಮಯ್ಯ ಅವರೊಂದಿಗೆ ಸಚಿವರಾದ ಕೆಜೆ ಜಾರ್ಜ್, ಜಿ ಪರಮೇಶ್ವರ, ಬಿ ಝಡ್ ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಕೆ ಸುಧಾಕರ್, ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಎಂಎಲ್‌ಸಿಗಳಾದ ಬಿಕೆ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸುಮಾರು 20 ನಾಯಕರು ಇದ್ದಾರೆ.
ಅವರೆಲ್ಲರೂ ಬಿಹಾರದಲ್ಲಿ ನಡೆಯುತ್ತಿರುವ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಎಂಒ ತಿಳಿಸಿದೆ.