ಬೆಳಗಾವಿ: ಪ್ರತೀ ವರ್ಷದಂತೆ ಈ ವರ್ಷವೂ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದೂಗಳ ದೊಡ್ಡ ಹಾಗೂ ಪವಿತ್ರ ಧಾರ್ಮಿಕ ಹಬ್ಬವಾದ ಗಣೇಶ ಹಬ್ಬದಂದು ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಮ್ಮ ಮನೆ ಹಾಗೂ ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಗೆ ಉದಾಹರಣೆಯಾದರು.
ರೋಷನ್ ಅವರು ತಮ್ಮ ಕುಟುಂಬದೊಂದಿಗೆ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಈ ವರ್ಷವೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ, ಜಿಲ್ಲಾಧಿಕಾರಿಗಳು ಗಣೇಶನ ಹೆಸರನ್ನು ಜಪಿಸುವ ಮೂಲಕ ಸ್ವಲ್ಪ ದೂರದವರೆಗೆ ಮೆರವಣಿಗೆಯಲ್ಲಿ ಮೂರ್ತಿಯನ್ನು ಹೊತ್ತುಕೊಂಡು ಸಾಗಿದರು. ಬಳಿಕ ತಮ್ಮ ಅಧಿಕೃತ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು, ಅಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರೋಷನ್ ಅವರು, ಜಿಲ್ಲೆಯ ಎಲ್ಲಾ ನಾಗರಿಕರಿಗೆ ಗಣೇಶ ಚತುರ್ಥಿ ಶುಭಾಶಯಗಳು ಎಂದು ಹೇಳಿದರು. ಜನರು ಹಬ್ಬವನ್ನು ಶಾಂತಿಯುತವಾಗಿ, ಸಹೋದರತ್ವ ಮತ್ತು ಐಕ್ಯತೆಯಿಂದ ಆಚರಿಸಬೇಕೆಂದು ಮನವಿ ಮಾಡಿದರು.