ಅಧಿಕಾರ ತಪ್ಪಿಸಿದ ಅಪವಾದ ಬರಬಾರದು, ರಾಷ್ಟ್ರಪತಿ ಆಳ್ವಿಕೆ ಬೇಡ: ನಟ ವಿಜಯ್ ಬೆಂಬಲ ಘೋಷಣೆ ಬಳಿಕ VCK ಮುಖ್ಯಸ್ಥ ಹೇಳಿಕೆ!

ವಿಧಾನಸಭೆಯ ತೀರ್ಪಿನ ಬಳಿಕ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗದಂತೆ ತಡೆಯುವುದು ಮತ್ತು ಜನರ ಜನಾದೇಶವನ್ನು ಕಾಪಾಡುವುದು ಈ ನಿರ್ಧಾರದ ಉದ್ದೇಶ ಎಂದು ವಿಸಿಕೆ ಪಕ್ಷ ತಿಳಿಸಿದೆ.
VCK chief Thirumavalavan
ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್
Updated on

ಚೆನ್ನೈ: ತಮಿಳುನಾಡು ರಾಜಕೀಯ ಗೊಂದಲ ಕೊನೆಗೂ ಅಂತ್ಯವಾಗಿದ್ದು, ವಿಸಿಕೆ ಪಕ್ಷದ ಬೆಂಬಲದೊಂದಿಗೆ ನಟ ವಿಜಯ್ ಸರ್ಕಾರ ರಚನೆಗೆ ಇದ್ದ ತೊಡಕು ನಿವಾರಣೆಯಾಗಿದೆ.

ವಿದುತಲೈ ಚಿರುಥೈಗಳ್ ಕಚ್ಚಿ (ವಿಸಿಕೆ) ಶನಿವಾರ, ಮೇ 9ರಂದು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಬೆಂಬಲ ಘೋಷಿಸಿದ್ದು, ವಿಧಾನಸಭೆಯ ತೀರ್ಪಿನ ಬಳಿಕ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗದಂತೆ ತಡೆಯುವುದು ಮತ್ತು ಜನರ ಜನಾದೇಶವನ್ನು ಕಾಪಾಡುವುದು ಈ ನಿರ್ಧಾರದ ಉದ್ದೇಶ ಎಂದು ಪಕ್ಷ ತಿಳಿಸಿದೆ.

ಅತ್ತ ನಟ ವಿಜಯ್ ಗೆ ತಮ್ಮ ಪಕ್ಷದ ಬೆಂಬಲ ಪತ್ರ ಹಸ್ತಾಂತರಿಸಿದ ಬೆನ್ನಲ್ಲೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್, ಎಡಪಂಥೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಹಾಗೂ ಪಕ್ಷದ ಒಳಾಂಗಣ ಚರ್ಚೆಗಳ ನಂತರ ಟಿವಿಕೆಗೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

'ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಸಿಕೆ ಎರಡು ಸ್ಥಾನಗಳನ್ನು ಗೆದ್ದಿದೆ. ಎರಡು ಕಮ್ಯುನಿಸ್ಟ್ ಪಕ್ಷಗಳೂ ತಲಾ ಎರಡು ಸ್ಥಾನಗಳನ್ನು ಪಡೆದಿವೆ. ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್ (ಎಸ್‌ಪಿಎ) ರಚನೆಯಾದ ಬಳಿಕ ನಾವು ಸಿದ್ಧಾಂತದ ಆಧಾರದ ಮೇಲೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಈ ಗಂಭೀರ ರಾಜಕೀಯ ಪರಿಸ್ಥಿತಿಯಲ್ಲಿ, ತಮಿಳುನಾಡಿನ ರಾಜಕೀಯದ ದೀರ್ಘಕಾಲೀನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಟಿವಿಕೆಗೆ ಬೆಂಬಲ ನೀಡಲು ನಾವು ತೀರ್ಮಾನಿಸಿದ್ದೇವೆ' ಎಂದು ಅವರು ಹೇಳಿದರು.

VCK chief Thirumavalavan
ತಮಿಳುನಾಡು ರಾಜಕೀಯ ಹೈಡ್ರಾಮ ಕೊನೆಗೂ ಅಂತ್ಯ: ನಟ ವಿಜಯ್ ಗೆ ಸಿಕ್ತು ಮ್ಯಾಜಿಕ್ ನಂಬರ್; VCK, IUML ಬೆಂಬಲ!

ಅಪವಾದ ಬರಬಾರದು

ಮೇ 8ರ ರಾತ್ರಿ ಸುಮಾರು 30 ಮಂದಿ ವಿಸಿಕೆ ಉನ್ನತ ಮಟ್ಟದ ಸಮಿತಿ ಸದಸ್ಯರೊಂದಿಗೆ ಆನ್‌ಲೈನ್ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜಕೀಯ ಪರಿಸ್ಥಿತಿಯ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ, ಟಿವಿಕೆಗೆ ಬೆಂಬಲ ನೀಡಲು ತೀರ್ಮಾನಿಸಿದೆವು. ಈಗಾಗಲೇ ನಮ್ಮ ಬೆಂಬಲ ಪತ್ರವನ್ನು ಅವರಿಗೆ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಅನಿಶ್ಚಿತತೆಯನ್ನು ತಪ್ಪಿಸುವುದು ಪಕ್ಷದ ತಕ್ಷಣದ ಚಿಂತೆಯಾಗಿದೆ. ಈ ರಾಜಕೀಯ ಪರಿಸ್ಥಿತಿಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವುದನ್ನು ನಾವು ತಡೆಯಲು ಬಯಸುತ್ತೇವೆ. 108 ಸ್ಥಾನಗಳನ್ನು ಗೆದ್ದಿದ್ದರೂ ಟಿವಿಕೆ ಸರ್ಕಾರ ರಚಿಸಲು ಕಷ್ಟಪಡುತ್ತಿತ್ತು. ಆದ್ದರಿಂದ ನಾವು ಅವರಿಗೆ ಬೆಂಬಲ ನೀಡಿದೆವು. ಸರ್ಕಾರ ರಚನೆ ವಿಫಲವಾಗಲು ವಿಸಿಕೆ ಕಾರಣವಾಗಬಾರದು ಎಂಬುದು ಪಕ್ಷದ ನಿಲುವು ಎಂದು ತಿರುಮಾವಳವನ್ ಹೇಳಿದರು.

'ಇಂದಿನ ಪರಿಸ್ಥಿತಿಯಲ್ಲಿ ನಾವು ಒಂದೇ ವಿಷಯದ ಮೇಲೆ ಗಮನಹರಿಸಿದ್ದೇವೆ. ವಿಜಯ್ ಸರ್ಕಾರ ರಚಿಸಲು ವಿಫಲರಾಗಲು ನಾವು ಕಾರಣವಾಗಬಾರದು. ರಾಷ್ಟ್ರಪತಿ ಆಡಳಿತಕ್ಕೆ ನಾವು ಕಾರಣವಾಗಬಾರದು. ಅದಕ್ಕಾಗಿ ಹೊರಗಿನಿಂದ ಬೆಂಬಲ ನೀಡುತ್ತಿದ್ದೇವೆ. ಟಿವಿಕೆಗೆ ಬೆಂಬಲ ನೀಡಿದರೂ ವಿಸಿಕೆ ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್ (ಎಸ್‌ಪಿಎ) ಮೈತ್ರಿಯಲ್ಲೇ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಬಲ ಘೋಷಿಸಿದ ಬಳಿಕ ವಿಜಯ್ ಸ್ವತಃ ವಿಸಿಕೆ ಕಚೇರಿಗೆ ಬರುವುದಾಗಿ ತಿಳಿಸಿದ್ದರು. ಆದರೆ ಪ್ರಮಾಣವಚನ ಸಮಾರಂಭದ ಬಳಿಕ ಭೇಟಿಯಾಗೋಣ ಎಂದು ನಾನು ಅವರಿಗೆ ಹೇಳಿದೆ ಎಂದು ಅವರು ಹೇಳಿದರು.

ಡಿಎಂಕೆ ಮೈತ್ರಿಯಲ್ಲೇ ಇರಲಿದ್ದೇವೆ

ಟಿವಿಕೆಗೆ ಬೆಂಬಲ ಘೋಷಣೆ ಹೊರತಾಗಿಯೂ ನಾವು ಡಿಎಂಕೆ ನೇತೃತ್ವದ ಎಸ್‌ಪಿಎ ಮೈತ್ರಿಯೊಂದಿಗೇ ಇದ್ದೇವೆ. ಆದರೆ ಈ ಮಹತ್ವದ ರಾಜಕೀಯ ಸಂದರ್ಭದಲ್ಲಿ ರಾಜಕೀಯ ಪಕ್ಷವಾಗಿ ನಮ್ಮ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಬಳಸಿದ್ದೇವೆ. ಇದರಿಂದ ಡಿಎಂಕೆಯೊಂದಿನ ನಮ್ಮ ಸಂಬಂಧಕ್ಕೆ ಯಾವುದೇ ಹಾನಿಯಾಗುತ್ತದೆ ಎಂದು ನಾವು ನಂಬುವುದಿಲ್ಲ. ಈ ನಿರ್ಧಾರ ಕೈಗೊಳ್ಳುವ ಮೊದಲು ವಿಸಿಕೆ ಡಿಎಂಕೆಗೆ ಮಾಹಿತಿ ನೀಡಿತ್ತು ಎಂದು ತಿರುಮಾವಳವನ್ ಹೇಳಿದರು.

'ಕಮ್ಯುನಿಸ್ಟ್ ಪಕ್ಷಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಎಂದು ಈಗಾಗಲೇ ಡಿಎಂಕೆಗೆ ತಿಳಿಸಿದ್ದೆವು. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ರಾಜಕೀಯ ಪಕ್ಷವಾಗಿ ನೀವು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಹಾಗೂ ನಮಗೆ ಶುಭಾಶಯ ತಿಳಿಸಿದ್ದಾರೆ. ಬಹುಮತ ಪಡೆದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಅವರು ನಿರಂತರವಾಗಿ ಹೇಳುತ್ತಿದ್ದರು ಎಂದು ತಿರುಮಾವಳವನ್ ಹೇಳಿದರು.

VCK chief Thirumavalavan
ವಿಜಯ್ -VCK ಡೀಲ್ ಅಂತಿಮ! EPS ನಿಗೂಢ ಪೋಸ್ಟ್ ಅರ್ಥವೇನು?

ರಾಜ್ಯಪಾಲರ ನಡೆ ವಿರುದ್ಧ ಆಕ್ರೋಶ

ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಲ್ಲಿ ರಾಜ್ಯಪಾಲ ರಾಜೇಂದ್ರ ಅರ್‌ಲೆಕರ್ ತೋರಿದ ವಿಳಂಬವನ್ನು ವಿಸಿಕೆ ನಾಯಕ ಟೀಕಿಸಿದರು. 'ರಾಜ್ಯಪಾಲರು ವಿಜಯ್ ಅವರನ್ನು ಭೇಟಿಯಾಗಲು ನಿರಾಕರಿಸಿರುವುದು ಆಶ್ಚರ್ಯಕರ ಸಂಗತಿ. ಜನರು ಟಿವಿಕೆಯನ್ನು ಅತಿದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದಾರೆ ಮತ್ತು ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ನಾವು ಈಗಾಗಲೇ ಹೇಳಿದ್ದೇವೆ. ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಮತ್ತು ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಟಿವಿಕೆಗೆ ಸ್ಪಷ್ಟ ಬಹುಮತವಿದೆ. ಈ ಪರಿಸ್ಥಿತಿಯಲ್ಲಿ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡುವುದು ಸಂವಿಧಾನಬದ್ಧ ಕ್ರಮ,” ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದ್ದವು. ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ತಪ್ಪಿಸುವುದು ಮತ್ತು ಜನರ ಆದೇಶಕ್ಕೆ ಗೌರವ ನೀಡುವುದು ಈ ನಿರ್ಧಾರದ ಉದ್ದೇಶ ಎಂದು ಅವು ತಿಳಿಸಿದ್ದವು. 'ರಾಷ್ಟ್ರಪತಿ ಆಡಳಿತ ಎಂದರೆ ಬಿಜೆಪಿಯು ಹಿಂಬಾಗಿಲಿನಿಂದ ಪ್ರವೇಶಿಸುವಂತೆಯೇ' ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com