ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಪಾವತಿಸಬೇಕಿರುವುದಕ್ಕಿಂತ ಹೆಚ್ಚು ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕ್ಗಳ ವಿರುದ್ಧವೇ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವೀಕರಿಸಿದ್ದು, ಸೆಪ್ಟೆಂಬರ್‌ಗೆ ಪಟ್ಟಿ ಮಾಡಿದೆ.
ಸಾಲದ ಮೊತ್ತ ಹಾಗೂ ವಸೂಲಿ ಮಾಡಿರುವ ಒಟ್ಟು ಮೊತ್ತದ ವಿವರ ನೀಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉದ್ಯಮಿ ವಿಜಯ್ ಮಲ್ಯ ಮತ್ತು ಈಗ ದಿವಾಳಿಯಾಗಿರುವ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್‌ಎಲ್)ನ ನಿರ್ದೇಶಕ ದಲ್ಜಿತ್ ಮಹಲ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸಾಲ ವಸೂಲಿ ನ್ಯಾಯಮಂಡಳಿಯು 2017ರ ಏಪ್ರಿಲ್ 10ರಂದು ಮಾಡಿರುವ ಮಾರ್ಪಡಿಸಲಾದ ತಿದ್ದುಪಡಿ ಅನುಸಾರ ಅರ್ಜಿದಾರ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ ಸಂಸ್ಥೆ(ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವ ಸಂಸ್ಥೆ) ಹಾಗೂ ಇತರೆ ಸಾಲ ಪಡೆದಿರುವ ಪ್ರಮಾಣಿತ ಸಂಸ್ಥೆಗಳು ತಮಗೆ ನೀಡಬೇಕಿರುವ ಬಡ್ಡಿ ಒಳಗೊಂಡ ಹಣಕಾಸಿನ ವಿವರದ ಪಟ್ಟಿ ಹಾಗೂ ಈಗಾಗಲೇ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಸ್ವತ್ತಿನ ಮಾಹಿತಿ ನೀಡುವಂತೆ ಸಾಲದಾತ ಸಂಸ್ಥೆಗಳಿಗೆ ಆದೇಶಿಸುವಂತೆ ವಿಜಯ್ ಮಲ್ಯ ಹಾಗೂ ದಲ್ಜಿತ್ ಮಹಲ್ ಕೋರಿದ್ದಾರೆ.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್, ಪ್ರಸ್ತುತ ಅರ್ಜಿ ಮತ್ತು ಇನ್ನೊಂದು ಡಬ್ಲ್ಯೂಪಿ 3357/2025 ಸಾಮಾನ್ಯ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಗಮನಿಸಿದರು.
6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಅದರಲ್ಲಿ 14,000 ಕೋಟಿ ರೂ. ವಸೂಲಾಗಿದೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್ಗೆ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಜನ್ ಪೂವಯ್ಯ ಮನವಿ ಮಾಡಿದರು.
ಸಜ್ಜನ್ ಪೂವಯ್ಯ ವಾದ ಆಲಿಸಿದ ಕೋರ್ಟ್, ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ 10 ಬ್ಯಾಂಕ್‌ಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ.