ಬೆಂಗಳೂರು: ಒಂದೆಡೆ ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಸಾಕ್ಷಿದಾರ- ದೂರುದಾರ ಚಿನ್ನಯ್ಯನ ಆರೋಪ ಕುರಿತು ವಿಶೇಷ ತನಿಖಾ ತಂಡ (SIT)ಕಳೆದೆರಡು ತಿಂಗಳುಗಳಿಂದ ತೀವ್ರ ವಿಚಾರಣೆ ನಡೆಸುತ್ತಿರುವಂತೆಯೇ ಮತ್ತೊಂದೆಡೆ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿ ಹೇಳಲು ಹಲವು ಮಂದಿ ಮುಂದೆ ಬಂದಿದ್ದಾರೆ.
ಈ ಸಂಬಂಧ ಮಂಡ್ಯ ಜಿಲ್ಲೆಯ 60 ವರ್ಷದ ಚಿಕ್ಕ ಕೆಂಪಮ್ಮ ಎಂಬವರು ಎಸ್ ಐಟಿಗೆ ಪತ್ರ ಬರೆದಿದ್ದಾರೆ. 2012ರ ಅಕ್ಟೋಬರ್ 9 ರಂದು ಯುವತಿಯನ್ನು ಅಪಹರಣ ಮಾಡಿದ್ದನ್ನು ಕಣ್ಣಾರೆ ನೋಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಅದೇ 2012ರ ಅಕ್ಟೋಬರ್ 9 ರಂದು ಸೌಜನ್ಯ ನಾಪತ್ತೆಯಾಗಿದ್ದರು. ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆಯಾಗಿದ್ದ ಆಕೆಯ ಮೃತದೇಹ ಅಕ್ಟೋಬರ್ 10ರಂದು ಪತ್ತೆಯಾಗಿತ್ತು. ಹೀಗಾಗಿ ಚಿಕ್ಕ ಕೆಂಪಮ್ಮ ನೋಡಿದ ಅಪಹರಣಕ್ಕೊಳಗಾದ ಯುವತಿ ಸೌಜನ್ಯ ಇರಬಹುದು ಎನ್ನಲಾಗುತ್ತಿದ್ದು, ಸೌಜನ್ಯ ಕೇಸ್ ರೀ ಓಪನ್ ಆಗುವ ಸಾಧ್ಯತೆಯಿದೆ.
ಪತ್ರದಲ್ಲಿ ಏನಿದೆ?
ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಹಲವಾರು ಅಪಹರಣ, ಅತ್ಯಾಚಾರ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಇಲ್ಲಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಕ್ಷಿಗಳು ಇದ್ದರೆ ಬಂದು ಹೇಳಿಕೆ ನೀಡಬಹುದು ಎಂದು ತಿಳಿಸಿರುವುದು ಸ್ವಾಗತಾರ್ಹ ವಿಚಾರ ಹಾಗೂ ನನಗೆ ಹೆಚ್ಚು ಧೈರ್ಯವನ್ನು ಕೊಟ್ಟಿದೆ. ಹಾಗಾಗೀ ನಾನು ಒಂದು ಸಾಕ್ಷಿಯಾಗಿ ತಮ್ಮ ಮುಂದೆ ಬರಲು ಇಚ್ಚಿಸುತ್ತೇನೆ.
ನಾನು ಚಿಕ್ಕಕೆಂಪಮ್ಮ. ನನಗೆ 62 ವರ್ಷ ವಯಸ್ಸಾಗಿದ್ದು, ಮಂಡ್ಯ ಜಿಲ್ಲೆಯವರು. ನಮ್ಮ ತಂದೆಯವರು ಪ್ರತಿ ವರ್ಷ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬರುತ್ತಿದ್ದರು. ನಮ್ಮ ತಂದೆ ಮರಣ ಹೊಂದಿದ ನಂತರ ನಾನು ಅವರು ಪುಣ್ಯಸ್ಮರಣೆ ಕಾರ್ಯವನ್ನು ಪ್ರತಿ ವರ್ಷ ಮಾಡುತ್ತಾ ಬರುತ್ತಿದ್ದೆ. ನಮ್ಮ ತಂದೆಯ ಹೆಸರಿನಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಹುಂಡಿಗೆ ಕಾಣಿಕೆಯಾಕಬೇಕಿತ್ತು. ಅಲ್ಲದೆ, ನನಗೆ ಚರ್ಮ ಸೋಂಕು ಇದ್ದ ಕಾರಣ ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿ ಒಮ್ಮೆ ತೋರಿಸಿ ಎಂದು ಪರಿಚಿತರು ಸಲಹೆ ನೀಡಿದ್ದರು. ಆದಕಾರಣ ನಾನು ಧರ್ಮಸ್ಥಳಕ್ಕೆ ಹೋದರೆ ಎರಡು ಕಾರ್ಯಗಳನ್ನು ಮುಗಿಸಿ ಬರಬಹುದೆಂದು ನಾನು ಮತ್ತು ನಿಂಗಮ್ಮ@ಕೆಂಚಮ್ಮ (ಇತ್ತೀಚೆಗೆ ಮೃತಪಟ್ಟರು) ಇಬ್ಬರೂ 2012 ರ ಅಕ್ಟೋಬರ್ 8ರಂದು ಮಂಡ್ಯದಿಂದ ರೈಲಿನಲ್ಲಿ ಹೊರಟು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಳಿದು, ಅಲ್ಲಿಂದ ಬಸ್‌ನಲ್ಲಿ ಅಕ್ಟೋಬರ್ 9ರ ಮುಂಜಾನೆ ಸುಮಾರು 6 ಗಂಟೆಗೆ ಧಮಸ್ಥಳಕ್ಕೆ ತಲುಪಿದೆವು.
ಮೊದಲಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದುಕೊಂಡು, ಅಲ್ಲೇ ದೇವಸ್ಥಾನದ ಪ್ರಸಾದ ಸೇವಿಸಿ, ಸ್ವಲ್ಪಕಾಲ ವಿಶ್ರಾಂತಿ ಪಡೆದು ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ನಂತರ, ಧರ್ಮಸ್ಥಳದ ದೇವಾಲಯದಿಂದ ಶಾಂತಿವನಕ್ಕೆ ಆಟೋದಲ್ಲಿ ಹೊರಟೆವು, ನಾವು ಶಾಂತಿವನವನ್ನು ತಲುಪಿದಾಗ ಮಳೆ ಬರುತ್ತಿದ್ದು, ಅಂದಾಜು 3ರಿಂದ 3.20 ಸಮಯವಾಗಿತ್ತು. ಆ ಸ್ಥಳದಲ್ಲಿ ಗಿಡಮರಗಳು ಹೆಚ್ಚಾಗಿದ್ದು, ಜನಸಂದಣಿ ಕಡಿಮೆ ಇತ್ತು. ಆಸ್ಪತ್ರೆಗೆ ಯಾರದಾರು ಹೋಗಿ ಬರುತ್ತಾರಲ್ಲ ಅವರನ್ನು ವಿಚಾರಿಸೋಣವೆಂದು ಹಾಗೂ ಮಳೆ ಬರುತ್ತಿದ್ದ ಕಾರಣ ನಾವು ಅಲ್ಲೆ ಇದ್ದ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡೆವು. 10 ರಿಂದ 15 ನಿಮಿಷಗಳು ಕಳೆಯಿತು. ಯಾರದರೂ ಬರುತ್ತಾರೆನೋ ಎಂದು ನೋಡುತ್ತಿದ್ದೆವು. ನಂತರ ನಾವು ಇದ್ದ ಸ್ಥಳಕ್ಕೆ ಎರೆಡು ದ್ವಿಚಕ್ರ ವಾಹನಗಳು ಬಂದವು. ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಇದ್ದು, ಮತ್ತೊಂದು ದ್ವಿಚಕ್ರ ವಾಹನದಲ್ಲಿ ಒಬ್ಬ ವ್ಯಕ್ತಿ ಇದ್ದ. ಈ ಮೂವರು ವ್ಯಕ್ತಿಗಳನ್ನು ಮಾತನಾಡಿಸಲು ಬೇರೋಂದು ದ್ವಿಚಕ್ರ ವಾಹನದಲ್ಲಿ ಇನ್ನೂ ಮೂವರು ವ್ಯಕ್ತಿಗಳು ಬಂದು ಮಾತನಾಡಿಸಿ ಹೊರಟು ಹೋದರು. ನಂತರ, ಒಂದು ಆಟೋರಿಕ್ಷಾ ಬಂದಿತು. ನಾವು ಕುಳಿತ್ತಿದ್ದ ಸ್ಥಳಕ್ಕೆ ವಿರುದ್ಧವಾದ ಜಾಗದಿಂದ 200 ಮೀಟರ್‌ನಷ್ಟು ದೂರದಲ್ಲಿ ಒಂದು ಕಾಲುದಾರಿ ಇತ್ತು. ಅ ಕಾಲುದಾರಿಯಲ್ಲಿ ಅವರೆಲ್ಲ ಹೋಗಿ ಬರುವುದು ಮಾಡುತ್ತಿದ್ದರು. ಇವರು ನಮ್ಮ ಕಡೆ ಬಂದರೆ ವಿಚಾರಿಸೋಣವೆಂದು ನಾವು ಅವರನ್ನೇ ನೋಡುತ್ತಾ ನಿಂತಿದ್ದೆವು.
ಅಷ್ಟರಲ್ಲಿ ಅವರೇ ನಮ್ಮ ಬಳಿ ಬಂದು, ಅದರಲ್ಲಿ ಇದ್ದ ಒಬ್ಬ ಅಪರಿಚಿತ ವ್ಯಕ್ತಿ ಬಿಕ್ಕಲ/ತೊದಲ (ಪ್ರತಿ ಬಾರಿ ಮಾತನಾಡುವಾಗ ಮೊದಲ ಅಕ್ಷರವನ್ನು ತೊದಲಿಸುತ್ತಿದ್ದ). ಆತ ನಮ್ಮನ್ನು ‘ಆಂಟಿ ನೀವು ಎಲ್ಲಿಂದ ಬಂದಿದ್ದೀರಾ, ಯಾಕೆ ಬಂದಿದ್ದೀರಾ’ ಎಂದು ಕೇಳಿದ. ಅದಕ್ಕೆ ನಾನು ಆಟೋ ಇರುವುದರಿಂದ ನಮ್ಮನ್ನು ಕರೆಯುತ್ತಿದ್ದಾರೆ ಎಂದು ಭಾವಿಸಿ ‘ಯಾಕಪ್ಪ, ನಾವು ಇಲ್ಲೆ ಪ್ರಕೃತಿ ಚಿಕಿತ್ಸಾಲಯಕ್ಕೆ ಡಾಕ್ಟರ್ ಅನ್ನು ನೋಡಲು ಬಂದಿದ್ದೇವೆ’ ಎಂದು ಹೇಳಿದೆ. ಅದಕ್ಕೆ ಆತ ‘ಇಲ್ಲಿ ಡಾಕ್ಟರ್ ಇಲ್ಲವಲ್ಲ. ನೀವು ಯಾಕೆ ಇಲ್ಲಿ ಕಾಯುತ್ತಾ ಕುಳಿತ್ತಿದ್ದೀರಾ, ಬೇಕಾದಷ್ಟು ಪ್ರಕೃತಿ ಚಿಕಿತ್ಸಾಲಯಗಳು ಇವೆ. ನೀವು ಬೇರೆ ಕಡೆ ತೋರಿಸಿಕೊಳ್ಳಬಹುದಲ್ವ’ ಎಂದು ಹೇಳಿದ. ಇದಕ್ಕೆ ನಾನು ‘ಸರಿ ಆಯ್ತು ಬಿಡಿ’ ಎಂದು ಉತ್ತರ ನೀಡಿ ಅಲ್ಲೇ ನಿಂತುಕೊಂಡೆವು. ಆಗ ತೊದಲಿಸಿಕೊಂಡು ಮಾತನಾಡುತ್ತಿದ್ದ ವ್ಯಕ್ತಿ ಯಾರಿಗೋ ಕರೆ ಮಾಡಿ ‘ಇಲ್ಲಿ ಇಬ್ಬರು ಲೇಡಿಸ್ ಇದ್ದಾರೆ, ಹೋಗುತ್ತಿಲ್ಲ’ ಎಂದು ತಿಳಿಸಿದನು. ಪೋನಿನಲ್ಲಿ ‘ನಿಚ್ಚು ನಿಚ್ಚು’ ಎಂದು ಮಾತನಾಡುತ್ತಿದ್ದದ್ದನ್ನು ನಾನು ಗಮನಿಸಿದ್ದೇನೆ. ನಂತರ ಅವರು ಮುಂದೆ ಸ್ವಲ್ಪ ದೂರು ಹೋಗಿ, ನಿಂತುಕೊಂಡು, ಪೋನಿನಲ್ಲಿ ಮಾತನಾಡುತ್ತಲೇ ಇದ್ದರು. ಅಲ್ಲಿ ಇದ್ದವರೆಲ್ಲ ಅಂದಾಜು ಐದೂವರೆ ಅಡಿ ಎತ್ತರವಿದ್ದು, ನಮ್ಮನ್ನು ಮಾತನಾಡಿಸಿದ ವ್ಯಕ್ತಿ ಸ್ವಲ್ಪ ಕುಳ್ಳನೆಯ ವ್ಯಕ್ತಿಯಾಗಿದ್ದನು. 3 ನಿಮಿಷದ ನಂತರ ಮತ್ತಿಬ್ಬರು ಬಂದು ‘ಆಂಟಿ ನೀವು ಹೊರಟುಬಿಡಿ. ಇಲ್ಲಿ ಯಾರು ಜನಗಳಿಲ್ಲ. ಯಾರು ಬರುವುದಿಲ್ಲ, ನೀವಿಬ್ಬರು ಲೇಡಿಸ್ ಇದ್ದಿರಾ, ಹೊರಡಿ’ ಎಂದು ಹೇಳಿದರು. ಹಾಗೂ ‘ಆಟೋದಲ್ಲಿ ನಿಮ್ಮನ್ನು ಬಿಟ್ಟುಕೊಡುವುದೇ’ ಎಂದು ಸಹ ಕೇಳಿದರು. ನಾವು ‘ಬೇಡ ಆಸ್ಪತ್ರೆಗೆ ಬಂದಿದ್ದೇವೆ, ನಾವೇ ಹೋಗುತ್ತೇವೆ’ ಎಂದು ಹೇಳಿದಾಗ, ‘ದುಡ್ಡನ್ನೇನು ಕೊಡಬೇಡಿ ಬನ್ನಿ ಬಿಟ್ಟು ಬರುತ್ತೇವೆ’ ಎಂದರು. ಆಗ, ನಮಗೆ ಪರಿಚಯವೇ ಇಲ್ಲ ದುಡ್ಡು ಕೊಡಬೇಡಿ ಎನ್ನುತ್ತಿದ್ದಾರಲ್ಲ ಎಂದು ನಾವು ಆಟೋದಲ್ಲಿ ಹೋಗದೇ ಅಲ್ಲೇ ಇದ್ದೇವು. 2 ನಿಮಿಷಗಳ ನಂತರ ಅವರು ನಾವು ಇದ್ದ ಜಾಗದಿಂದ ಮರಳಿದರು.
ನಂತರ ಆ ಸಮಯದಲ್ಲಿ ಅಂದಾಜು 16 ವರ್ಷ ವಯಸ್ಸಿನ ಪ್ರಾಯದ ಹೆಣ್ಣು ಮಗುವೊಂದು ಛತ್ರಿಯನ್ನು ಹಿಡಿದುಕೊಂಡು ಸಮವಸ್ತ್ರದಲ್ಲಿ ನಮ್ಮ ಎದುರುಗಡೆಯಿಂದ ನಡೆದುಕೊಂಡು ಬರುತ್ತಿತ್ತು. ಆಕೆಯನ್ನು ನೋಡಿದ ನಾನು, ನನ್ನ ಸೋದರತ್ತೆಯ ಮಗಳ ರೀತಿಯಲ್ಲಿ ಇದ್ದಾಳೆ ಎಂದು ನನ್ನ ಜೊತೆ ಇದ್ದ ಕೆಂಚಮ್ಮರವರಿಗೆ ‘ನೋಡಿ ಕೆಂಚಮ್ಮ ಆ ಹುಡುಗಿ ನಮ್ಮ ಜ್ಯೋತಿ ತರ ಇದ್ದಾಳೆ ಅಲ್ಲವೇ, ನಾನು ಆಕೆಯೇ ಎಂದುಕೊಂಡೆ’ ಎಂದು ಹೇಳಿ, ಆಕೆಯನ್ನೇ 2 ರಿಂದ 3 ನಿಮಿಷಗಳ ಕಾಲ ನೋಡುತ್ತಿದ್ದೆ. ನಂತರ ನನ್ನ ಜೊತೆ ಇದ್ದ ಕೆಂಚಮ್ಮರವರು ನೇಚರ್ ಕಾಲ್ (ಮೂತ್ರವಿಸರ್ಜನೆ) ಮಾಡಬೇಕು ಎಂದು ಅಲ್ಲೇ ಸಮೀಪ ಇದ್ದ ಮರದ ಬಳಿ ಹೋದರು. ನಾನು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದೆ.
ಅಷ್ಟರಲ್ಲಿ ಜೋರಾಗಿ ಕೂಗಿಕೊಂಡ ಶಬ್ದ ನನಗೆ ಕೇಳಿಬಂತು. ನಾನು ತಿರುಗಿ ನೋಡಿದಾಗ, ಅಲ್ಲಿ ಒಂದು ದೊಡ್ಡ ಬೂದು ಬಣ್ಣದ ಕಾರು ಬಂದು ನಿಂತಿತ್ತು. ನನ್ನನ್ನು ಮಾತನಾಡಿಸಿದ ಅಪರಿಚಿತ ವ್ಯಕ್ತಿಗಳು ಆ ಹುಡುಗಿಯನ್ನು ಹಿಡಿದುಕೊಂಡಿದ್ದರು. ಅ ಹುಡುಗಿ ಜೋರಾಗಿ ಹಾ… ಅಪ್ಪ… ಅಮ್ಮ…. ಎಂದು ಜೋರಾಗಿ ಕಿರುಚಾಡುತ್ತಿದ್ದಳು. ಆ ಹುಡುಗಿ ಬಿಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಳು, ಆಗ ಆಕೆಯು ಹಿಡಿದಿದ್ದ ಛತ್ರಿ ಕೆಳಗಡೆ ಬಿತ್ತು. ಅಲ್ಲದೇ ಮತ್ತೊಂದು ವಸ್ತು ಕೂಡ ಕೆಳಗಡೆ ಬಿತ್ತು. ಆದರೆ ಆ ವಸ್ತು ಏನು? ಯಾರದ್ದು? ಎಂದು ನನಗೆ ತಿಳಿಯಲಿಲ್ಲ. ನಂತರ ಆ ಹುಡುಗಿಯ ಕೈಯನ್ನು ತಿರುಚಿದರು. ಆಕೆಯ ಬಾಯಿಯನ್ನು ಮುಚ್ಚಿದರು. ನಂತರ ಆಕೆಯ ಕೂಗಾಟ ನಿಂತಿತ್ತು. ಇದನ್ನು ಸ್ವಲ್ಪ ದೂರದಿಂದಲೇ ನೋಡಿದ ನಾನು ಆ ಕಡೆ ಓಡಿ ಬರುತ್ತಿದ್ದೆ. ಇನ್ನೇನೋ ನಾನು ಅಲ್ಲಿ ತಲುಪುವಷ್ಟರಲ್ಲಿ ಅವರೆಲ್ಲ ಆ ಹುಡುಗಿಯನ್ನು ಕಿಡ್ನಾಪ್ ಮಾಡಿಕೊಂಡು ಹೊರಟುಬಿಟ್ಟರು. ಆ ಬಾಲಕಿಯನ್ನು ಅಲ್ಲಿದ್ದ ಕಾರಿನೊಳಗೋ ಅಥವಾ ಆಟೋದಲ್ಲಿ ದಬ್ಬಿದರೋ ಎಂದು ನೋಡುವಷ್ಟರಲ್ಲಿ ಅವರು ಅ ಸ್ಥಳದಿಂದ ಪಾಸಾಗಿ ಮುಂದೆ ಹೊರಟು ಹೋದರು.
ಮೊದಲಿಗೆ ಕಾರು ಹೋಯಿತು. ನಂತರ ಆ ಕಾರಿನ ಹಿಂದೆಯೇ ಆಟೋ ತೆರಳಿತು. ಆದರೆ, ಅವರೆಲ್ಲ ಹೊರಟ ನಂತರ ಅಲ್ಲೇ ಒಬ್ಬ ದಪ್ಪ ಹಾಗೂ ಕುಳ್ಳನೆಯ ವ್ಯಕ್ತಿ ಉಳಿದುಕೊಂಡ, ನಾವು ಬಂದು ಬಿಡುತ್ತೇವೆ ಎಂಬ ಉದ್ದೇಶದಿಂದಲೋ ಆತ ಅಲ್ಲೇ ಇದ್ದ ಎನಿಸುತ್ತದೆ. ಆತ ನಮ್ಮ ಕಡೆಯೇ ನಡೆದುಕೊಂಡು ಬರುತ್ತಿದ್ದ. ಆತನನ್ನು ನಾನೇ ‘ಯಾಕೆ ಆ ಹುಡುಗಿ ಆ ರೀತಿ ಕಿರುಚಿಕೊಂಡಿತು. ಅವರೆಲ್ಲ ಸೇರಿಕೊಂಡು ಯಾಕೆ ಈ ರೀತಿ ಮಾಡಿದರೂ, ಅ ಹುಡುಗಿಯನ್ನು ಎಲ್ಲಿಗೆ ಕರೆದುಕೊಂಡು ಹೋದರು’ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಆ ವ್ಯಕ್ತಿ ‘ಇಲ್ಲಾ.. ಇಲ್ಲಾ.. ಅದು ಅವರ ಮನೆಯಿಂದ ಬೇಜಾರಿನಲ್ಲಿ ಆಕೆ ಬಂದದ್ದು. ಮನೆಯವರೇ ಅವರು, ಅದಕ್ಕೆ ಆಕೆಯನ್ನು ಕರೆದುಕೊಂಡು ಹೋದದ್ದು’ ಎಂದು ಹೇಳಿದ. ಅದಕ್ಕೆ ನಾನು ‘ಕರೆದುಕೊಂಡು ಹೋಗಲು ಯಾಕೆ ಇಷ್ಟೊಂದು ಜೋರಾಗಿ ಕಿರುಚಿಕೊಂಡಳು, ಅವರ ಮನೆಯವರೆ ಬಂದಿದ್ದರೆ ಕಿರುಚಿಕೊಳ್ಳೋ ಅವಶ್ಯಕತೆ ಇರಲಿಲ್ಲ ಅಲ್ಲವೇ’ ಎಂದು ಪ್ರಶ್ನೆ ಮಾಡಿದಾಗ, ಆತ ‘ನಿಮಗೆ ಯಾಕೆ ಬೇಕು ಇದೆಲ್ಲ. ನೀವು ಎಲ್ಲಿಂದ ಬಂದ್ರಿ, ನೀವು ಸುಮ್ಮನೆ ಹೋಗಿ, ನಿಮಗೆ ಯಾಕೆ ಬೇಕು ಅದೆಲ್ಲ’ ಎಂದು ಗದರಿಸಿದ. ನಂತರ ನಾವು ಸ್ವಲ್ಪ ಸಮಯ ಅಲ್ಲೇ ನಿಂತು ಸುತ್ತಮುತ್ತ ನೋಡುತ್ತಿದ್ದೇವು, ‘ನೀವು ಹೊರಡಿ ಈಗ’ ಎಂದು ಜೋರಾಗಿ ಹೇಳಿದ.
ನಂತರ ನಾವು ಅಲ್ಲಿಂದ ನಡೆದುಕೊಂಡು ಮುಂದೆ ಬಂದು, ನಾವು ಇಲ್ಲಿಗೆ ಬಂದಿದ್ದು ಸುಮ್ಮನೆ ವ್ಯರ್ಥವಾಯಿತು ಎಂದು ಮಾತನಾಡಿಕೊಳ್ಳುತ್ತಾ ಅಲ್ಲಿಂದ ಹೊರಟು ಮತ್ತೆ ಬಸ್ಸಿನಲ್ಲಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದೆವು. ನಂತರ ಅಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ ದೇವರ ದರ್ಶನ ಪಡೆದು, ವಾಪಸ್ಸು ಮನೆಗೆ (ದಿನಾಂಕ 10/08/2012 ) ಬಂದೆವು.
ಅದಾಗ್ಗಿಯೂ, ಅ ದಿನ ಬಸ್ಸಿನಲ್ಲಿ ಕುಳಿತುಕೊಂಡಾಗಲೂ ನಾವು ಪೊಲೀಸ್ ಠಾಣೆಗೆ ವಿಚಾರವನ್ನು ತಿಳಿಸಬಹುದಿತ್ತು ಎಂದು ಮಾತನಾಡುವಾಗಲೂ ನನ್ನ ಜೊತೆ ಇದ್ದ ಅಜ್ಜಿ ಕೆಂಚಮ್ಮ ಅದರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುತ್ತೀರಾ ಬಿಟ್ಟಾಕಿ ಎಂದರು. ನಾನು ಈ ಘಟನೆಯಾದ ಐದಾರು ದಿನಗಳವರೆಗೂ ಕೂಡ ನಡೆದ ಘಟನೆಯ ಬಗ್ಗೆ ಯೋಚನೆ ಮಾಡುತ್ತಿದ್ದೆ. ಈ ಘಟನೆಯ ಬಗ್ಗೆ ನ್ಯೂಸ್ ಚಾನೆಲ್‌ನಲ್ಲಿ 2012ರಲ್ಲಿ ಮಾಹಿತಿ ಬಂದಿತ್ತೋ ಏನೋ ನನಗೆ ತಿಳಿದಿಲ್ಲ. ಯಾಕೆಂದರೆ ನಮ್ಮ ಬಳಿ 2012ರಲ್ಲಿ ಸ್ಕ್ರೀನ್ ಟಚ್ ಪೋನ್‌ಗಳಾಗಲೀ ಹಾಗೂ ಮನೆಯಲ್ಲಿ ಟಿವಿ ಕೂಡ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಟಿವಿ ಮಾಧ್ಯಮಗಳ ಮೂಲಕ ಧರ್ಮಸ್ಥಳದಲ್ಲಿ ನಡೆದ ಪ್ರಕರಣಗಳ ಬಗ್ಗೆ ನೋಡಿದೆ. ಹಾಗೂ ನಾನು ಈ ಹಿಂದೆ ಮಾತನಾಡಿದ ವ್ಯಕ್ತಿಗಳನ್ನು ಸಹ ನೋಡಿ, ‘ನಾನು ಧರ್ಮಸ್ಥಳಕ್ಕೆ ತೆರಳಿದಾಗ ಇವರೇ ಅಲ್ಲವೇ ಅ ಬಾಲಕಿಯನ್ನು ಅಪಹರಣ ಮಾಡಿದವರು, ಇವರೇ ಅಲ್ಲವೇ ನನ್ನನ್ನು ಅ ದಿನ ಮಾತನಾಡಿಸಿದ್ದು’ ಎಂದು ಖಾತ್ರಿಪಡಿಸಿಕೊಂಡೆ.
ನಾವು 2012ರಲ್ಲಿ ನೋಡಿದ ಬಾಲಕಿಯ ಅಪಹರಣ ಮಾಡಿ, ಆಕೆಯನ್ನು ಅತ್ಯಾಚಾರ-ಕೊಲೆ ಮಾಡಿದಾರೆ ಎಂಬುವುದು ತಿಳಿಯಿತು. ನಂತರ ನನಗೆ ಈ ಘಟನೆಗಳಿಂದ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಪದೇ ಪದೇ ಅದೇ ವಿಚಾರಗಳು ನೆನಪಿಗೆ ಬರುತ್ತಿದ್ದವು. ಮಾಧ್ಯಮದಲ್ಲಿ ನಾನು ನೋಡಿದ ಕೆಲವು ವ್ಯಕ್ತಿಗಳನ್ನು ನಾನು ಗುರುತಿಸಬಲ್ಲೆ. ನಾನು ನೋಡಿದ ಸನ್ನಿವೇಶ ನನ್ನ ಕಣ್ಣಲ್ಲಿ ಅಚ್ಚಳಿಯದೆ ಉಳಿದಿದೆ.
ಇತ್ತೀಚಿನ ದಿನಗಳಲ್ಲಿ ಅಂದಿನ ಆ ಅನ್ಯಾಯವನ್ನು ನೆನೆದು ನಿದ್ರೆಯನ್ನು ಕಳೆದುಕೊಳ್ಳುತ್ತಿದ್ದೇನೆ. ನನಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಇರುವುದರಿಂದ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳ ಚಿತ್ರ ನನ್ನನ್ನು, ನನ್ನ ನೈತಿಕತೆಯನ್ನು ಹಾಗೂ ನನ್ನ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡುತ್ತಿದೆ. ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ನಾನು ನನ್ನ ಮನೆ ದೇವರಾದ ಶ್ರೀ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ನಡೆದ ಅನಾಚಾರದಿಂದಾಗಿ ಚಿಂತೆಗೀಡಾಗಿದ್ದೇನೆ. ನಾನು ನೋಡಿದ ಸತ್ಯ ವಿಚಾರಗಳನ್ನು ನ್ಯಾಯಾಲಯದ ಮುಂದೆ ಹೇಳುವ ತನಕ ನನಗೆ ಮುಕ್ತಿ ಸಿಗುವುದಿಲ್ಲ ಎಂದೇ ನಾನು ನಂಬಿದ್ದೇನೆ. ಮೊದಲಿನಿಂದಲೂ ನ್ಯಾಯಕ್ಕೆ ಧರ್ಮಕ್ಕೆ ತಲೆಬಾಗಿ ಪ್ರಾಮಾಣಿಕವಾಗಿ ಜೀವಿಸುತ್ತಿರುವ ನನಗೆ ಯಾವುದೇ ಭಯವಿಲ್ಲ. ಈ ವಿಚಾರದಲ್ಲಿ ಯಾರ ಒತ್ತಡವಾಗಲಿ, ಕುಮ್ಮಕ್ಕಾಗಲಿ ನನ್ನ ಮೇಲೆ ಇರುವುದಿಲ್ಲ. ನಾನು ಯಾವ ಬಗೆಯ ತನಿಖೆಗೂ ಬದ್ಧಳಾಗಿರುತ್ತೇನೆ. ಆದುದರಿಂದ ನನ್ನ ಹೇಳಿಕೆಯನ್ನು ಪಡೆದು, ನನ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಹಾಗೂ ನಾನು ಆ ದಿನ ಆ ಹೆಣ್ಣು ಮಗಳ ಅಪಹರಣದಲ್ಲಿ ಭಾಗಿಯಾದವರ ಗುರುತಿಸಬಲ್ಲವಳಾಗಿದ್ದೇನೆ. ದಯಮಾಡಿ ಈ ಕಾನೂನು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಚಿಕ್ಕಕೆಂಪಮ್ಮ ಬರೆದಿದ್ದಾರೆ.