ಬೆಂಗಳೂರು: ವಿವಿಧ ವಲಯಗಳ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು (ವೇತನ ಸಹಿತ) ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ (ಬಿಎಚ್‌ಎ) ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡಲಾಗುತ್ತಿಲ್ಲ ಎದು ಸಂಘವು ಎತ್ತಿ ತೋರಿಸುವ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿದೆ.
2025ರ ನವೆಂಬರ್ 12ರಂದು, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವರ್ಷದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ನೀಡುವಂತೆ ಎಲ್ಲ ಉದ್ಯೋಗದಾತರಿಗೂ ಸೂಚಿಸಲಾಗಿದೆ.
ಈ ಯಾವುದೇ ಕಾನೂನುಗಳು ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ಅಧಿಕಾರ ನೀಡುವುದಿಲ್ಲ ಮತ್ತು ರಜೆ ನೀತಿಗಳು ವೈಯಕ್ತಿಕ ಸಂಸ್ಥೆಗಳ ಆಂತರಿಕ ಆಡಳಿತಾತ್ಮಕ ಕ್ಷೇತ್ರದೊಳಗೆ ಬರುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಆದೇಶವನ್ನು 'ತಾರತಮ್ಯ' ಎಂದು ಕರೆದಿರುವ ಅಸೋಸಿಯೇಷನ್, ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ನೀಡಿರುವ ಸರ್ಕಾರವೇ ತನ್ನ ಉದ್ಯೋಗಿಗಳಿಗೆ ಇದೇ ರೀತಿಯ ನಿಬಂಧನೆಯನ್ನು ಜಾರಿಗೆ ತಂದಿಲ್ಲ ಎಂದಿದೆ.
ವಕೀಲ ಬಿಕೆ ಪ್ರಶಾಂತ್ ಈ ಪ್ರಕರಣದಲ್ಲಿ ಅಸೋಸಿಯೇಷನ್ ಅನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಎಚ್‌ಎ ಗೌರವಾಧ್ಯಕ್ಷ ಪಿಸಿ ರಾವ್ ಅವರ ಪ್ರಕಾರ, ಅರ್ಜಿಯನ್ನು ಶೀಘ್ರದಲ್ಲೇ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ ಎಂದಿದ್ದಾರೆ.