ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಗ್ಗಜಗ್ಗಾಟದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಾಲ್ಗೊಂಡು ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಇದೀಗ ಡಿ.2ಕ್ಕೆ ತಮ್ಮ ನಿವಾಸಕ್ಕೆ ಉಪಹಾರಕ್ಕೆ ಬರುವಂತೆ ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ಬರೂ ಬ್ರದರ್ಸ್ ತರಹ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನಿಮ್ಮ ಒತ್ತಡಕ್ಕಾಗಿ ನಾವು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು ಅಷ್ಟೇ, ನಮಗೆ ಅವಶ್ಯಕತೆ ಇರಲಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ಗುಂಪು ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಟ್ರಾಫಿಕ್ 'ಮೋಸ್ಟ್ ನಟೋರಿಯಸ್' ಎಂದು ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಹೇಳಿದ್ದು 'ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ'ಗಾಗಿ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಟೀಕಿಸಿದ್ದರು. ನಿನ್ನೆ ಬೆಂಗಳೂರಿಗೆ ಬಂದಿದ್ದ ರಾಜೀವ್ ರೈ, ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಯಿಂದ ಸಿಲುಕಿಕೊಂಡಿದ್ದು ವಿಮಾನವನ್ನು ತಪ್ಪಿಸಿಕೊಳ್ಳುವ ಅಪಾಯವಿತ್ತು ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸಿಎಂ ಸಿದ್ದರಾಮಯ್ಯಗೆ ಟ್ಯಾಗ್ ಮಾಡಿದ್ದರು. 'ಕ್ಷಮಿಸಿ, ಆದರೆ ನಿಮ್ಮ ಸಂಚಾರ ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ. ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕ ಸಂಚಾರ ಪೊಲೀಸರು. ನನ್ನ ಫೋನ್ ಕರೆಯನ್ನು ಯಾರೊಬ್ಬರೂ ಸ್ವೀಕರಿಸಲಿಲ್ಲ. ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದರಿಂದ ವಿಮಾನ ಮಿಸ್ ಆಗಲಿದೆ. ನಾಳಿನ ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಬೇಕಾಗಿದೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೆಹಲಿಯಲ್ಲಿನ ಸಂಚಾರ ಪರಿಸ್ಥಿತಿಯನ್ನು ತೋರಿಸಬೇಕಾ ಎಂದು ಪ್ರಶ್ನಿಸಿದ್ದಾರೆ. ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ದೆಹಲಿಯಲ್ಲಿನ ಟ್ರಾಫಿಕ್ ಹೇಗಿದೆ ಎಂಬುದನ್ನು ತೋರಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ವಿವಿಧ ವಲಯಗಳ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವೇತನ ಸಹಿತ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡಲಾಗುತ್ತಿಲ್ಲ ಎಂದು ಸಂಘವು ಎತ್ತಿ ತೋರಿಸುವ ಮೂಲಕ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿದೆ. 2025ರ ನವೆಂಬರ್ 12ರಂದು ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವರ್ಷದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ನೀಡುವಂತೆ ಎಲ್ಲ ಉದ್ಯೋಗದಾತರಿಗೆ ಸೂಚಿಸಿತ್ತು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚಿಸಿ ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಲು ಪ್ರಯತ್ನಿಸಲಾಗುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಭಗವದ್ಗೀತೆಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ಕುಮಾರಸ್ವಾಮಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಶಾಲಾ ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನ ನೀಡಲು ರಾಮಾಯಣ ಮತ್ತು ಮಹಾಭಾರತವನ್ನು ಕಲಿಸಬೇಕು. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸುವ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚಿಸುವುದಾಗಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಇಂದು ಹಲವಾರು ಉದ್ಯೋಗ ಆಕಾಂಕ್ಷಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ಜನಸಾಮಾನ್ಯರ ವೇದಿಕೆ ಮತ್ತು ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಶ್ರೀನಗರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಲು ಆಕಾಂಕ್ಷಿಗಳು ಯೋಜಿಸಿದ್ದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ನಗರದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಶ್ರೀನಗರ ಪ್ರದೇಶದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.