ಬೆಂಗಳೂರು: 'ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ'ಗಾಗಿ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಟೀಕಿಸಿದ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಬೆಂಗಳೂರು ನಗರದ ಟ್ರಾಫಿಕ್ 'ಮೋಸ್ಟ್ ನಟೋರಿಯಸ್' ಎಂದು ಕರೆದಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿದ್ದ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿ, ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಒಂದು ಗಂಟೆಯಿಂದ ಸಿಲುಕಿಕೊಂಡಿದ್ದರಿಂದ ವಿಮಾನವನ್ನು ತಪ್ಪಿಸಿಕೊಳ್ಳುವ ಅಪಾಯವಿದೆ ಎಂದು ಹೇಳಿದ್ದಾರೆ.
ನವೆಂಬರ್ 30 ರಂದು ಮಾಡಿರುವ ಪೋಸ್ಟ್‌ನಲ್ಲಿ ರೈ, 'ಕ್ಷಮಿಸಿ, ಆದರೆ ನಿಮ್ಮ ಸಂಚಾರ ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ ಮತ್ತು ಅತ್ಯಂತ ಬೇಜವಾಬ್ದಾರಿ, ನಿಷ್ಪ್ರಯೋಜಕ ಸಂಚಾರ ಪೊಲೀಸರು. ಅವರು ಫೋನ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ, ಅವರೊಂದಿಗೆ ಮಾತನಾಡಲು ನಾನು ಮಾಡಿದ ಪ್ರಯತ್ನದ ಸ್ಕ್ರೀನ್‌ಶಾಟ್ ಇಲ್ಲಿದೆ. ಅವರಲ್ಲಿ ಯಾರೊಬ್ಬರೂ ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಕಳೆದ ಒಂದು ಗಂಟೆ ನಾವು ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದ್ದೇವೆ. ಇದರಿಂದಾಗಿ ವಿಮಾನ ಮಿಸ್ ಆಗಲಿದೆ. ನಾಳೆ ನಾನು ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಬೇಕಾಗಿದೆ' ಎಂದಿದ್ದಾರೆ.
'ಸುತ್ತಲೂ ಒಬ್ಬನೇ ಒಬ್ಬ ಪೊಲೀಸ್ ಕೂಡ ಕಾಣಿಸುತ್ತಿಲ್ಲ. ಈ ಸುಂದರ ನಗರದ ಹೆಸರು ಮತ್ತು ಮೋಡಿಯನ್ನು ಹಾಳು ಮಾಡಲು ಈ ಅದಕ್ಷ ಅಧಿಕಾರಿಗಳು ಸಾಕು. ನಿಸ್ಸಂದೇಹವಾಗಿ ಈಗ ಬೆಂಗಳೂರು ಸಂಚಾರವು ಅತ್ಯಂತ ಕುಖ್ಯಾತ ಸಂಚಾರ ಎಂಬ ಖ್ಯಾತಿಯನ್ನು ಗಳಿಸಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ.
ರೈ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದೆಹಲಿಯಲ್ಲಿನ ಸಂಚಾರ ಪರಿಸ್ಥಿತಿಯನ್ನು ತೋರಿಸುವುದಾಗಿ ಹೇಳಿದರು.
'ಸರಿ. ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ದೆಹಲಿಯಲ್ಲಿನ ಟ್ರಾಫಿಕ್ ಹೇಗಿದೆ ಎಂಬುದನ್ನು ತೋರಿಸುತ್ತೇನೆ. ನಾನು ಕೂಡ ಅವರನ್ನು ಟ್ಯಾಗ್ ಮಾಡುತ್ತೇನೆ' ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚಿನ ತಿಂಗಳುಗಳಲ್ಲಿ, ಬೆಂಗಳೂರಿನ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿದ್ದು, ರಾಜ್ಯ ಸರ್ಕಾರಕ್ಕೆ ಒತ್ತಡ ಸೃಷ್ಟಿಯಾಗಿದೆ.