ಮೈಸೂರು: 2030 ರೊಳಗೆ ಏಡ್ಸ್ ಹರಡುವಿಕೆ ಶೂನ್ಯಕ್ಕೆ ಇಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಜೆ ಕೆ ಅಡಿಟೋರಿಯಂನಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಇತ್ತೀಚಿಗೆ ಪುರುಷ ಸಲಿಂಗಿಗಳಲ್ಲಿ ಹೆಚ್ಚಿನ ರೋಗಿಗಳು ದಾಖಲಾಗುತ್ತಿರುವುದು ಆತಂಕ ಮೂಡಿಸುತ್ತದೆ. ಬೇರೆ ಬೇರೆ ಆಪ್ ಗಳ ಮೂಲಕ, ಹಾಸ್ಟೆಲ್ ಗಳಲ್ಲಿ ಸ್ನೇಹಿತರ ಸಂಪರ್ಕ ಸಾಧಿಸುತ್ತಾರೆ. ಇದನ್ನು ತಡೆಯಲು ಹೆಚ್ಚಿನ ಶ್ರಮ ಹಾಕಬೇಕಾದ ಅನಿವಾರ್ಯತೆ ಇದೆ ಎಂದರು.
ಇದು ಕಾನೂನು ಬಾಹಿರ ಅಲ್ಲ. ಕೇವಲ ಜಾಗೃತಿ ಮೂಡಿಸುವ ಮೂಲಕವೇ ತಡಯಬೇಕಾದ ಹೊಣೆಗಾರಿಕೆ ಇದೆ. ಸರ್ಕಾರ, ಪಾಲಕರು, ಶಿಕ್ಷಕರು, ಸಮಾಜ, ಮಾಧ್ಯಮಗಳ ಸಹಕಾರದಿಂದ ಇದರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.
2004 ರಿಂದ 2025ರವರೆಗೆ ಒಂದು ಲಕ್ಷಕ್ಕೂ ಅಧಿಕ ಜನರು ಏಡ್ಸ್ ಗೆ ಬಲಿಯಾಗಿದ್ದಾರೆ. ಮೊದಲು ಏಡ್ಸ್ ಕುರಿತು ಅಜ್ಞಾನದಿಂದ ಸಮಾಜದಲ್ಲಿ ಬಹಳ ಸಮಸ್ಯೆ ಆಗಿತ್ತು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ HIV ಪೀಡಿತರಿಗೆ ಭರವಸೆ ತುಂಬುವ ಕೆಲಸ ಆರೋಗ್ಯ ಇಲಾಖೆ ಮಾಡಿದೆ ಎಂದು ತಿಳಿಸಿದರು.
ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಸೋಂಕಿತರ ಜೊತೆ ನಾವಿದ್ದೇವೆ ಎಂದು ಧೈರ್ಯ ಹೇಳಲು, ಏಡ್ಸ್ ನಿಂದ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಆಚರಿಸುತ್ತದೆ.
ಏಡ್ಸ್ ಬಂದಾಗ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಲ್ಲರಂತೆ ಬದುಕಬಹುದು. ಸರ್ಕಾರ ಉಚಿತ ಮಾನಸಿಕ ಧೈರ್ಯ ತುಂಬುವುದರ ಜೊತೆಗೆ ಉಚಿತವಾಗಿ ಚಿಕಿತ್ಸೆ, ಮಡಿಸಿನ್ ನೀಡುತ್ತದೆ ಎಂದರು.
HIV ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹಾಗೆಯೇ ಆರೊಗ್ಯ ವ್ಯವಸ್ಥೆಯೂ ನಮ್ಮಲ್ಲಿ ಚೆನ್ನಾಗಿರುವುದರಿಂದ ಪರಿಸ್ಥಿತಿ ಉಲ್ಬಣಗೊಂಡಿಲ್ಲ. ಅಧಿಕಾರಿಗಳು ಎನ್ ಜಿ ಓಗಳ ಜೊತೆ ಸೇರಿ ಹಲವಾರು ಕಾರ್ಯಕ್ರಮ ರೂಪಿಸಿ, ಜನರಲ್ಲಿ ಅರಿವು ಮೂಡಿಸುವುದು, ಸಮಾಜದಲ್ಲಿ ಅವರಿಗೆ ಮುಜುಗರವಾಗದಂತೆ ತಡೆಯುವುದು, ಸರಿಯಾಗಿ ಚಿಕಿತ್ಸೆ ಮಡೆದುಕೊಳ್ಳಲು ಪಾಲೋಅಪ್ ಮಾಡುವುದು ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.