ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿ ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಮೃತಪಟ್ಟಿದ್ದ ದರ್ಶನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.
ಹೌದು.. ಕುಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು ನವೆಂಬರ್15ರಂದು ಪೊಲೀಸ್ ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ದರ್ಶನ್ ತೀವ್ರ ಗಂಭೀರವಾದಾಗ ಆತನನ್ನು ನೆಲಮಂಗಲದ ರಿಹ್ಯಾಬ್ ದಾಖಲಿಸಿದ್ದಾರೆ. ಈ ವೇಳೆ ಆತ ಅಲ್ಲಿಯೇ ಮೃತಪಟ್ಟಿದ್ದ.
ಇದೀಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ವಿವೇಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿದಂತೆ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಅಮಾನತಾಗಿರುವ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ಸ್ಥಾನಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ವಿರೇಶ್ ಅವರನ್ನು ವರ್ಗಾವಣೆ ಮಾಡಿದ್ದಾರೆ.
ಏನಿದು ಘಟನೆ?
ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ದರ್ಶನ್ ನನ್ನು ವಿವೇಕನಗರ ಪೊಲೀಸರು ಠಾಣೆಗೆ ಎಳೆದು ತಂದು 3 ದಿನ ಇರಿಸಿಕೊಂಡಿದ್ದರು. ಆದರೆ ಆತನ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಿಸದೇ ಆತನನ್ನು ಮನಸೋ ಇಚ್ಛೆ ಥಳಿಸಿದ್ದರು.
ಆತನ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ನೆಲಮಂಗಲದ ಯುನಿಟಿ ರಿಹ್ಯಾಬ್ ಸೆಂಟರ್ ಗೆ ದಾಖಲಿಸಿದ್ದರು. ರಿಹ್ಯಾಬ್ ಸೆಂಟರ್ಗೆ ಸೇರಿಸಿದ 10 ದಿನಗಳಲ್ಲಿ ಯುವಕ ದರ್ಶನ್ ಮೃತಪಟ್ಟಿದ್ದ.
ಈ ವಿಚಾರ ತಿಳಿದ ದರ್ಶನ್ ಕುಟುಂಬಸ್ಥರು ಪೊಲೀಸರ ಹಲ್ಲೆಯಿಂದಲೇ ದರ್ಶನ್ ಸಾವನ್ನಪ್ಪಿದ್ದಾನೆ ಎಂದೂ ದೂರಿದ್ದರು. ಈ ಸಂಬಂಧ ಮಾದನಾಯಕನ ಹಳ್ಳಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಲ್ಲದೆ ಈ ಪ್ರಕರಣ ಸಂಬಂಧ ಇಲಾಖಾ ತನಿಖೆ ನಡೆದಿತ್ತು. ಇದೀಗ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಈ ಪ್ರಕರಣಕ್ಕೆ ಸಂಬಂದಿಸಿದಂತೆ 4 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಪೋಷಕರ ಆರೋಪ
ನ.12ರಂದು ದರ್ಶನ್ನನ್ನು ಅಕ್ರಮವಾಗಿ ಬಂಧಿಸಿದ್ದ ಪೊಲೀಸರು, ಆತನನ್ನ ಮೂರು ದಿನ ವಶದಲ್ಲಿಟ್ಟುಕೊಂಡು ಲಾಠಿ, ಪೈಪ್ನಿಂದ ಹಲ್ಲೆ ಮಾಡಿದ್ದರಂತೆ. ಈ ಹಲ್ಲೆಯನ್ನು ಮರೆಮಾಚಲು ರಿಯಾಬ್ ಸೆಂಟರ್ಗೆ ಸೇರಿಸಿದ್ದರು. ಆದರೆ ರಿಯಾಬ್ನವರು ಕೂಡ ಸರಿಯಾದ ಚಿಕಿತ್ಸೆ ನೀಡಿಲ್ಲ. ಹೀಗಾಗಿ 8 ದಿನದ ಬಳಿಕ ದರ್ಶನ್ ಸಾವನ್ನಪ್ಪಿದ್ದು, ಇದೊಂದು ಕೊಲೆ ಎಂದು ಆತನ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪವನ್ ಸೇರಿದಂತೆ ನಾಲ್ಕು ಪೊಲೀಸರು ಮತ್ತು ಯೂನಿಟಿ ರಿಯಾಬ್ ಸೆಂಟರ್ ಮಾಲೀಕರ ವಿರುದ್ಧ ಕೊಲೆ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿತ್ತು.
ಕೇಸ್ ಸಿಐಡಿಗೆ ವರ್ಗಾವಣೆ
ಸದ್ಯ ವಿವೇಕನಗರ ಪೊಲೀಸರ ಮೇಲೆ ದಾಖಲಾದ ಕಸ್ಟೋಡಿಯಲ್ ಡೆತ್ ಕೇಸ್ ಸಿಐಡಿಗೆ ವರ್ಗಾವಣೆ ಆಗಿದ್ದು, ತನಿಖೆ ಶುರುವಾಗಿದೆ. ಇತ್ತ ದರ್ಶನ್ ಮರಣೋತ್ತರ ಪರೀಕ್ಷೆ ಮುಗಿಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇನ್ನು ಘಟನೆ ಬಗ್ಗೆ ಕೇಂದ್ರ ವಿಭಾಗದ ಹಿರಿಯ ಅಧಿಕಾರಿಗಳು ಕೂಡ ಮಾಹಿತಿ ಪಡೆಯುತ್ತಿದ್ದಾರೆ.