ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟಕ್ಕೆ ಸದ್ಯ ವಿರಾಮ ದೊರೆತ್ತಿರುವಂತೆಯೇ 2ನೇ ಬಾರಿಗೆ ನಡೆದ 'ಬ್ರೇಕ್ ಪಾಸ್ಟ್ ' ರಾಜಕೀಯ ತೀವ್ರ ಕುತೂಹಲಕ್ಕೆ ಕಾರಣವಾಯಿತು.
ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಉಪಹಾರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಹಾರ ಸಭೆಯಲ್ಲಿ ಪಕ್ಷ ಹಾಗೂ ಸರ್ಕಾರದ ವಿಚಾರ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು, ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದ್ರೂ ಎದುರಿಸುತ್ತೇವೆ ಎಂದರು.
ಒಗ್ಗಟ್ಟು ಪ್ರದರ್ಶನ: ನಾನು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರದರ್ಸ್, ಇಬ್ಬರದು ಒಂದೇ ಪಕ್ಷ, ಒಂದೇ ಸಿದ್ದಾಂತ. ನಾವು ಯಾವಾಗಲೂ ಒಟ್ಟಾಗಿ ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಪಹಾರಕ್ಕೆ ಕರೆದಾಗ ಹಳ್ಳಿಯಿಂದ ನಾಟಿ ಕೋಳಿ ತರುವಂತೆ ಹೇಳಿದ್ದಂತೆ ಅದರಂತೆ ನಾಟಿ ಕೋಳಿ ಸವಿದಿದ್ದೇನೆ. ನಾನು ನಾನ್ ವೆಜ್. ಅವರು ವೆಜ್. ರಾಹುಲ್ ಗಾಂಧಿ ಹೇಳಿದಂತೆ ನಡೆದುಕೊಳ್ಳಬೇಕು. ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ, ಭವಿಷ್ಯದಲ್ಲೂ ಒಗ್ಗಟ್ಟಾಗಿ ಇರ್ತೀವಿ. ಅಧಿವೇಶನದ ಸಂದರ್ಭದಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಾಗಿ ವಿಪಕ್ಷವನ್ನು ಎದುರಿಸುತ್ತೇವೆ ಎಂದರು.
ರಾಹುಲ್ ಹೇಳಿದಂತೆ ಕೇಳಬೇಕು: ಹೈಕಮಾಂಡ್ ತೀರ್ಮಾನದಂತೆ ಸಂಪುಟ ವಿಸ್ತರಣೆ ಮಾಡುತ್ತೇವೆ. ಸಂಪುಟ ವಿಸ್ತರಣೆ ಬಗ್ಗೆ ಮೊನ್ನೆಯೇ ತೀರ್ಮಾನ ಆಗಿದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. ರಾಹುಲ್ ಗಾಂಧಿ ಹೇಳಿದಂತೆ ನಡೆದುಕೊಳ್ಳಬೇಕು. ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ಅವರನ್ನು ಭೇಟಿಯಾಗುತ್ತೆ. ಹೈಕಮಾಂಡ್ ಯಾವಾಗಲೂ ಕರೆದರೂ ಹೋಗುತ್ತೇವೆ ಎಂದರು.
ಹೈಕಮಾಂಡ್ ಹೇಳಿದಾಗ ಡಿಕೆ ಸಿಎಂ: ಈ ಮಧ್ಯೆ ಡಿಕೆ ಶಿವಕುಮಾರ್ ಯಾವಾಗ ಸಿಎಂ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಹೈಕಮಾಂಡ್ ಹೇಳಿದಾಗ ಎಂದರು.
ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ: ರಾಜ್ಯದಲ್ಲಿನ ರೈತರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಸರ್ಕಾರ ಯಾವಾಗಲೂ ರೈತರ ಪರವಾಗಿದೆ. ಈ ಬಾರಿ ರೈತರು ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ. 54-55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗಬಹುದು. ಮೆಕ್ಕೆ ಜೋಳಕ್ಕೆ ಕೇಂದ್ರ ಸರ್ಕಾರಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಮಾಡಿದೆ.ಆದರೆ ಮಾರುಕಟ್ಟೆ ಬೇರೆ ಬೇರೆ ಬೆಲೆ ಇದೆ. ಕನಿಷ್ಠ ಬೆಂಬಲ ಬೆಲೆ (MSP) ಹಾಗೂ MRP ನಿಗದಿ ಮಾಡುವುದು ಕೇಂದ್ರ ಸರ್ಕಾರ. ಅದನ್ನು ನ್ಯಾಯ ಬೆಲೆ ಅಂಗಡಿ (PDS) ಮೂಲಕ ವಿತರಣೆ ಮಾಡಲು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಕಬ್ಬಿಗೆ ಬೆಲೆ ನಿಗದಿ ವಿಚಾರವಾಗಿ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಡಿ.8 ಕ್ಕೆ ದೆಹಲಿ ಭೇಟಿ: ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಉಪಹಾರ ಸಭೆಗೆ ಮೊದಲು ನಾನೇ ಸಿಎಂ ಅವರನ್ನು ಆಹ್ವಾನಿಸಿದೆ. ಆದರೆ, ಅವರ ಮನೆಯಲ್ಲಿ ಮೊದಲ ಉಪಹಾರ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಪಕ್ಷ, ಸರ್ಕಾರ ಹಾಗೂ ಅಧಿವೇಶನದ ಬಗ್ಗೆ ಚರ್ಚೆ ನಡೆದಿದೆ. ಉತ್ತಮ ಆಡಳಿತ ನೀಡಲು ಹಾಗೂ ನಮ್ಮ ರಾಜ್ಯದ ನಿರಂತರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸುತ್ತೇವೆ. ಡಿಸೆಂಬರ್ 8 ರಂದು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು.