ನವದೆಹಲಿ: ಕರ್ನಾಟಕದಲ್ಲಿ ಸಹಕಾರಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಇದುವರೆಗೆ 4,164.95 ಕೋಟಿ ರೂ.ಗಳನ್ನು ವಿತರಿಸಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ನವೆಂಬರ್ 25 ರ ಹೊತ್ತಿಗೆ, ದೇಶಾದ್ಯಂತ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ(ಎನ್‌ಸಿಡಿಸಿ) ಒಟ್ಟಾರೆಯಾಗಿ 4,67,455.66 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 4,164.95 ಕೋಟಿ ರೂ.ಗಳನ್ನು ಕರ್ನಾಟಕದಲ್ಲಿ ಸಹಕಾರಿ ಅಭಿವೃದ್ಧಿಗಾಗಿ ವಿತರಿಸಲಾಗಿದೆ ಎಂದು ಅಮಿತ್ ಶಾ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಹಕಾರಿ ದತ್ತಸಂಚಯ(ಎನ್‌ಸಿಡಿ) ಪ್ರಕಾರ, ಕರ್ನಾಟಕದಲ್ಲಿ ಒಟ್ಟು 46,798 ಸಹಕಾರಿ ಸಂಘಗಳಿದ್ದು, 2.38 ಕೋಟಿ ಸದಸ್ಯರನ್ನು ಹೊಂದಿವೆ.
ಸಹಕಾರ ಸಚಿವಾಲಯವು 2021 ರಲ್ಲಿ ಪ್ರಾರಂಭವಾದಾಗಿನಿಂದ, 'ಸಹಕಾರ-ಸೇ-ಸಮೃದ್ಧಿ'ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ಕರ್ನಾಟಕ ಸೇರಿದಂತೆ ದೇಶಾದ್ಯಂತ ಡೈರಿ, ಸಕ್ಕರೆ ಮತ್ತು ಕೃಷಿ ಸಹಕಾರ ಸಂಘಗಳನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.