ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿ ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಮೃತಪಟ್ಟಿದ್ದ ದರ್ಶನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಭುಗಿಲೆದ್ದಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿ ಅಲ್ಲ.. ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಕಾರ್ಯಕರ್ತರು ಮತ್ತು ಮೃತ ಯುವಕ 22 ವರ್ಷದ ದರ್ಶನ್ ಅವರ ಕುಟುಂಬ ಸದಸ್ಯರು, ವಿವೇಕನಗರ ಪೊಲೀಸರು (CID) ತನಿಖೆ ನಡೆಸುವ ಬದಲು ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ PUCL ಉಪಾಧ್ಯಕ್ಷ ವೈ.ಜೆ. ರಾಜೇಂದ್ರ, 'ದರ್ಶನ್ ಅವರ ಸಾವಿನ ನಂತರ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಪೊಲೀಸರು ಅವರ ಪತ್ನಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಅವರಿಗೆ ಹಣದ ಆಮಿಷವನ್ನೂ ನೀಡಿದ್ದಾರೆ ಎಂದು ಹೇಳಿದರು.
ದರ್ಶನ್ ಅವರನ್ನು ನವೆಂಬರ್ 12 ರಂದು ವಿವೇಕನಗರ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿ ನಂತರ ನವೆಂಬರ್ 16 ರಂದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ನವೆಂಬರ್ 26 ರಂದು ಅವರು ಪುನರ್ವಸತಿ ಕೇಂದ್ರದಲ್ಲಿ ನಿಧನರಾದರು ಎಂದು ಪ್ರೊ. ರಾಜೇಂದ್ರ ಹೇಳಿದರು.
ಸತ್ಯಶೋಧನಾ ತಂಡ ರಚನೆ
ಪಿಯುಸಿಎಲ್ ವಕೀಲರು ಮತ್ತು ವಿವಿಧ ಸಂಘಟನೆಗಳ ಸದಸ್ಯರ ಸತ್ಯಶೋಧನಾ ತಂಡವನ್ನು ರಚಿಸಿದೆ. ದರ್ಶನ್ ಅವರನ್ನು ಅಕ್ರಮವಾಗಿ ಬಂಧಿಸಲಾಗಿದ್ದರೂ, ಪೊಲೀಸರು ಅವರ ಕುಟುಂಬಕ್ಕೆ ಯಾವುದೇ ಮೆಮೊ ನೀಡಿಲ್ಲ ಎಂದು ಪಿಯುಸಿಎಲ್ ಸದಸ್ಯರು ತಿಳಿಸಿದ್ದಾರೆ.
ರಿಹ್ಯಾಬ್ ಗೆ ಕಳುಹಿಸಲು ಒಪ್ಪಿಗೆಯೇ ಪಡೆದಿಲ್ಲ..
ದರ್ಶನ್ ಅವರಿಗೆ ಗಾಯಗಳಾಗಿದ್ದರೂ, ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಎಂದು ಅವರ ತಾಯಿ ಆದಿಲಕ್ಷ್ಮಿ ಹೇಳಿದ್ದಾರೆ. ದರ್ಶನ್ ಅವರನ್ನು ಯೂನಿಟಿ ಫೌಂಡೇಶನ್ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅವರು ಯಾವುದೇ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ತಮ್ಮ ಮಗನ ಮೇಲೆ ಠಾಣೆಯೊಳಗೆ ಲಾಠಿ ಮತ್ತು ಪೈಪ್‌ಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಕಸ್ಟಡಿಯಲ್ಲಿ ಅನುಭವಿಸಿದ ಹಿಂಸೆಯನ್ನು ಕಡಿಮೆ ಮಾಡಲು ಅವರು ಅವನನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರು ಎಂದರು.
ಚಿತ್ರಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿ ವಿರುದ್ಧ ಎಸ್‌ಎಚ್‌ಆರ್‌ಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು. ಸರ್ಕಾರ ದರ್ಶನ್ ಅವರ ಕುಟುಂಬ ಸದಸ್ಯರ ಸುರಕ್ಷತೆಯನ್ನು, ವಿಶೇಷವಾಗಿ ಅವರ ಪತ್ನಿಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅದು ಹೇಳಿದೆ.
ಪೊಲೀಸರಿಂದ ಹಣದ ಆಮಿಷ, ದರ್ಶನ್ ಪತ್ನಿ ಆರೋಪ
ದರ್ಶನ್ ಅವರ ಪತ್ನಿ ಅಶ್ವಿನಿ ಅವರು, ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿ ಹಣವನ್ನು ನೀಡುವುದಾಗಿ ತಿಳಿಸಿದ್ದು, ಪ್ರಕರಣವನ್ನು ಮುಂದುವರಿಸದಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು. "ನನಗೆ ಹಣ ಬೇಡ. ನನಗೆ ಎರಡು ವರ್ಷದ ಮಗಳಿದ್ದಾಳೆ. ನನಗೆ ನ್ಯಾಯ ಬೇಕು. ಅದಕ್ಕಾಗಿಯೇ ನಾವು ಇಲ್ಲಿದ್ದೇವೆ. ಯಾರೂ ಈ ಪರಿಸ್ಥಿತಿಯನ್ನು ಎದುರಿಸಬಾರದು" ಎಂದು ಅವರು ಹೇಳಿದರು.
ಪೊಲೀಸರ ಅಮಾನತು
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ವಿವೇಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿದಂತೆ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಅಮಾನತಾಗಿರುವ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ಸ್ಥಾನಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ವಿರೇಶ್ ಅವರನ್ನು ವರ್ಗಾವಣೆ ಮಾಡಿದ್ದಾರೆ.