ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ 12.30ಕ್ಕೆ ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಬಳಿ ತಡರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ವಿಶ್ವನಾಥ್ ಕಂಬಾರ್ (17), ಪ್ರವೀಣ್ ಶೇಡಬಾಳ್ (22), ಗಣೇಶ ಅಳ್ಳಿಮಟ್ಟಿ (20), ಪ್ರಜ್ವಲ್ ಶೇಡಬಾಳ್ (17) ಮೃತ ದುರ್ದೈವಿಗಳು.
ಮೃತರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಮೃತದೇಹವನ್ನ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಇರಿಸಲಾಗಿದ್ದು, ಸಿದ್ದಾಪುರ ಗ್ರಾಮದಿಂದ ಸ್ನೇಹಿತರು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಜಮಖಂಡಿ ಗ್ರಾಮೀಣ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.