ಬೆಂಗಳೂರು: ಡಿ.14ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಮತಗಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತಿದ್ದು, ರಾಜ್ಯದ ಪ್ರತಿ ಜಿಲ್ಲೆಯಿಂದ 300 ಮಂದಿ ಕರೆದೊಯ್ಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಹೇಳಿದರು.
ದೆಹಲಿಗೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಭಟನೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ 300 ಜನರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸಚಿವರಿಗೆ ಹಾಗೂ ಶಾಸಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಮಾವೇಶಕ್ಕೆ ತೆರಳಲಿರುವ ನಮ್ಮ ಕಾರ್ಯ ಕರ್ತರಿಗೆ ವಾಸ್ತವ್ಯ ಕಲ್ಪಿಸುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ. ಆ ದೃಷ್ಟಿಯಿಂದ ದೆಹಲಿಗೆ ಹೋಗುತ್ತಿದ್ದು, ಗುರುವಾರದ ಸಚಿವ ಸಂಪುಟ ಸಭೆಗಾಗಿ ವಾಪಸ್ ಬರುತ್ತೇನೆ ಎಂದು ತಿಳಿಸಿದರು.
ಮತಗಳ್ಳತನ ಹೋರಾಟ ಕರ್ನಾಟಕದಿಂದಲೇ ಆರಂಭವಾಗಿದ್ದು, ಅದಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರತಿ ಜಿಲ್ಲೆಯಿಂದ 300 ಜನರು, ಪ್ರತಿ ತಾಲೂಕಿನಿಂದ ಕನಿಷ್ಠ 30 ಜನರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ವಿಶೇಷ ರೈಲಿಗಾಗಿ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದೇನೆ. ಎಲ್ಲ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು.ಈ ಬಗ್ಗೆ ನಾನು ಮತ್ತು ಮುಖ್ಯ ಮಂತ್ರಿ ಅವರು ಎಲ್ಲರಿಗೂ ಸಂದೇಶ ರವಾನಿಸಿದ್ದೇವೆ ಎಂದರು.
ಇದೇ ವೇಳೆ ಸರ್ವಪಕ್ಷ ಸಭೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ, ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರ ಬಳಿ ಚರ್ಚೆ ನಡೆಸಿ ವಿರೋಧ ಪಕ್ಷದವರಿಗೆ ಸರಿಹೋಗುವ ದಿನಾಂಕದಂದು ಸಭೆ ನಿಗದಿ ಮಾಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿ, ಇಬ್ಬರು ನಾಯಕರ ಭೇಟಿ ಬಹಳ ಸಂತೋಷ. ಮುಖ್ಯಮಂತ್ರಿ ಅವರು ವೇಣು ಗೋಪಾಲ್, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷದ ವಿಚಾರವಾಗಿ ಅವರು ಮಾತನಾಡುತ್ತಾರೆ ಎಂದರು.