ಬೆಂಗಳೂರು: ರಾಜ್ಯದ ವಿವಿಧೆಡೆ ಸರ್ಕಾರಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಹಾಸ್ಟೆಲ್ ಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿ ಆಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಕುರಿತ ವರದಿಯೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷ ನಾಯಕ ಆರ್, ಅಶೋಕ, ಸಿಎಂ ಸಿದ್ದರಾಮಯ್ಯರೇ, ಅಹಿಂದ ಹೆಣ್ಣು ಮಕ್ಕಳ ಮೇಲೆ ಕಾಳಜಿ ಇದ್ದರೆ 'ಸರ್ಕಾರಿ ಹಾಸ್ಟೆಲ್ ಟೂರ್' ಮಾಡಿ ಎಂದು ಒತ್ತಾಯಿಸಿದ್ದಾರೆ.
ಬಡ ಕುಟುಂಬದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿರುವ ಸರ್ಕಾರಿ ಎಸ್ಸಿ-ಎಸ್ಟಿ, ಒಬಿಸಿ ಹಾಸ್ಟೆಲ್ ಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿ ಆಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಅತ್ಯಂತ ಅಂತಕಕಾರಿ ಬೆಳವಣಿಗೆಯಾಗಿದ್ದು, ಇದನ್ನ ರಾಜ್ಯ ಸರ್ಕಾರ ಗಂಬೀರವಾಗಿ ಪರಿಗಣಿಸಿ ಈ ಪಿಡುಗನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ದಲಿತರು, ಹಿಂದುಳಿದ ವರ್ಗಗಳು, ಬಡವರ ಮನೆಯ ಹೆಣ್ಣುಮಕ್ಕಳ ಮೇಲೆ ಕಾಳಜಿ ಇದ್ದರೆ, ಹೈಕಮಾಂಡ್ ಮೆಚ್ಚಿಸಲು ಡಿ.ಕೆ.ಶಿವಕುಮಾರ್ ಅವರ ಮನೆ 'ಹೋಮ್ ಟೂರ್' ಮಾಡುವ ಬದಲು ಅವ್ಯವಸ್ಥೆಯ ಆಗರವಾಗಿರುವ "ಸರ್ಕಾರ ಹಾಸ್ಟೆಲ್ ಟೂರ್" ಮಾಡಿ, ಶ್ರೀಮಂತರ ಮನೆಯಲ್ಲಿ ರುಚಿಯಾದ ನಾಟಿಕೋಳಿ ಅಡುಗೆ ಮಾಡಿಸಿಕೊಂಡು ತಿನ್ನುವ ಬದಲು ಸರ್ಕಾರಿ ಹಾಸ್ಟೆಲ್ ಗಳಲ್ಲಿ ಬಡ ಮಕ್ಕಳಿಗೆ ಉಣಬಡಿಸುವ "ರುಚಿ-ಶುಚಿ"ಯಾದ ಊಟವನ್ನು ಒಮ್ಮೆ ತಿಂದು ನೋಡಿ ಸ್ವಾಮಿ ಎಂದು ಪೋಸ್ಟ್ ಮಾಡಿದ್ದಾರೆ.
ಅಹಿಂದ ಹೆಸರಿನಲ್ಲಿ ದಲಿತರು, ಹಿಂದುಳಿದವರ ವೋಟು ಗಿಟ್ಟಿಸಿಕೊಂಡು ಅಧಿಕಾರ ಅನುಭವಿಸಿದ್ದು ಬಿಟ್ಟರೆ ನೀವು ಅವರಿಗೆ ಕೊಟ್ಟ ಕೊಡುಗೆಯಾದರೂ ಏನು ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.