ಬೆಂಗಳೂರು/ಮಂಡ್ಯ: ಮಂಡ್ಯ ಜಿಲ್ಲೆಯ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯು ಬುಧವಾರ ನಡೆದಿದ್ದು, ಈ ವೇಳೆ ಮಾಲಾಧಾರಿಗಳು ಜಾಮೀಯಾ ಮಸೀದಿಗೆ ನುಗ್ಗಲು ಯತ್ನಿಸಿದಾಗ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸಂಕೀರ್ತನಾ ಯಾತ್ರೆಯ ನಡೆಯುವ ವೇಳೆ ನೂಕುನುಗ್ಗಲು ನಡೆದಿದ್ದು, ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವರು ಜಾಮಿಯಾ ಮಸೀದಿ ಪ್ರವೇಶದ್ವಾರದ ಬಳಿ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನ ತಡಿಯಲು ಯತ್ನಿಸಿದ್ದು, ಇದರಿಂದ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಶ್ರೀರಂಗಪಟ್ಟಣದ ಜಾಮೀಯ ಮಸೀದಿ ಪಕ್ಕದ ಪುರಸಭೆ ವೃತ್ತದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಕರ್ಪೂರ ಹಚ್ಚಿ ಕೆಲ ಕಾಲ ರಸ್ತೆಯಲ್ಲೇ ಕುಳಿತು ರಾಮ ಹಾಗೂ ಆಂಜನೇಯ ಸ್ವಾಮಿ ಭಜನೆ ನಡೆಸಿದರು. ನಂತರ ರಕ್ತದ ಕಣ ಕಣ ಕುದಿಯುತ್ತಿದೆ ಹಿಂದೂ, ಹಿಂದೂ ಎನ್ನುತ್ತಿದೆ. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೆ ಕಟ್ಟು ವೆವು, ಕಟ್ಟುವೆವು ಮಂದಿರವಿಲ್ಲೆ ಕಟ್ಟುವೆವು ಎಂದು ಘೋಷಣೆ ಕೂಗಿದರು.
ಇದೇ ವೇಳೆ ಜಾಮಿಯಾ ಮಸೀದಿ ಬಳಿ ವೃತ್ತದಲ್ಲಿ 4 ನಿಂಬೆಹಣ್ಣು ಇಟ್ಟು, ಬೂದುಕುಂಬಳ ಕಾಯಿ ಮೇಲೆ ಕರ್ಪೂರ ಹಚ್ಚಿದ ಮಾಲಾಧಾರಿಗಳು ಇಳಿ ತೆಗೆದು ಕುಂಬಳಕಾಯಿ ಹೊಡೆದು ಮಸೀದಿ ಕಡೆ ಕೈ ಮಾಡಿ ಆ ಜಾಗ ನಮ್ಮದು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಪೊಲೀಸರು ಅವರನ್ನು ತಡೆದು ಮುಖ್ಯ ರಸ್ತೆಯಲ್ಲಿ ತೆರಳಲು ಸೂಚಿಸಿದರು. ಬಳಿಕ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದು ಸ್ವಲ್ಪ ಹೊತ್ತು ನೂಕುನುಗ್ಗಲು, ತಳ್ಳಾಟ, ನೂಕಾಟ ಉಂಟಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿವಾದಿತ ಸ್ಥಳವಾದ ಜಾಮಿಯಾ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಿದ್ದರೂ ಹನುಮ ಭಕ್ತರು ಮಸೀದಿ ಬಳಿ ನುಗ್ಗಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದರು.
ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಲ್ದಂಡಿ ಅವರು ಮಾತನಾಡಿ, ಸ್ಥಳದಲ್ಲಿ ಗಂಭೀರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರಲಿಲ್ಲ. ಸಂಕೀರ್ತನೆ ಯಾತ್ರೆ ಶಾಂತಿಯುತವಾಗಿತ್ತು ಮಾಲಾಧಾರಿನಗಳು ಶಾಂತಿಯುತವಾಗಿಯೇ ಮಸೀದಿಯನ್ನು ದಾಟಿದರು. ಪ್ರತೀ ಜಂಕ್ಷನ್ ನಲ್ಲಿ ಸಾಕಷ್ಟು ಭದ್ರತೆಯನ್ನು ನಿಯೋಜಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಕೋಮು ಘರ್ಷಣೆ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಾಗಮಂಗಲ ಮತ್ತು ಮದ್ದೂರಿನಲ್ಲಿ ಗಣೇಶ ಚತುರ್ಥಿ ಮೆರವಣಿಗೆಗಳ ಸಮಯದಲ್ಲಿ ನಡೆದ ಘರ್ಷಣೆಗಳ ಬಳಿಕ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ನಡುವೆ ಹಳೆಯ ಮೈಸೂರು ಪ್ರದೇಶದಲ್ಲಿ ಕೋಮುವಾದ ಸೃಷ್ಟಿಸಲು ಬಿಜೆಪಿ-ಆರ್‌ಎಸ್‌ಎಸ್ ಸಂಘಟಿತ ಪ್ರಯತ್ನದ ಭಾಗ ಇದಾಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಆರೋಪಿಸಿದೆ.
ಈ ಭಾಗದಲ್ಲಿ ನೆಲೆಯೂರಲು ಹೆಣಗಾಡುತ್ತಿದ್ದಾರೆ. ಇಲ್ಲಿನ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿ ಅಭ್ಯರ್ಥಿಗಳು ನಿಯಮಿತವಾಗಿ ಶೇಕಡಾ 10 ಕ್ಕಿಂತ ಕಡಿಮೆ ಮತಗಳನ್ನು ಗಳಿಸಿದ್ದಾರೆ. ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಕೋಮುವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬಿ. ಸೋಮಶೇಖರ್ ಅವರು ಪ್ರತಿಕ್ರಿಯಿಸಿ, ಒಕ್ಕಲಿಗ ಹೃದಯಭಾಗವಾಗಿರುವ ಮಂಡ್ಯವನ್ನು ಕೋಮುವಾದಿಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ. ಈ ಪ್ರದೇಶದ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಬದುಕುತ್ತಿದ್ದಾರೆ, ಇದನ್ನು ಕುವೆಂಪು 'ಶಾಂತಿಯ ತೋಟ' ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಹಾನಿ ಸಂಭವಿಸುವ ಮೊದಲು ಈ ರೀತಿಯ ಉದ್ದೇಶಪೂರ್ವಕ ಪ್ರಚೋದನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಕೀರ್ತನಾ ಯಾತ್ರೆ ಶಾಂತಿಯುತವಾಗಿ ಪೂರ್ಣಗೊಂಡಿದ್ದರೂ, ಮೆರವಣಿಗೆಗಳ ಮೂಲಕ ಅಥವಾ ಹನುಮಾನ್ ಸಂಕೀರ್ತನಾ ಯಾತ್ರೆಯಂತಹ ಸಾಂಕೇತಿಕ ಯಾತ್ರೆ ಮೂಲಕ ಸಾರ್ವಜನಿಕ ಸ್ಥಳಗಳನ್ನು ಕೇಸರೀಕರಣಗೊಳಿಸಲು ಪದೇ ಪದೇ ಪ್ರಯತ್ನಗಳು ನಡೆಯುತ್ತಿವೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಒಕ್ಕಲಿಗ ಪ್ರತಿನಿಧಿಗಳು ಹೇಳಿದ್ದಾರೆ.
ಕೋಮು ರಾಜಕೀಯವನ್ನು ಸಮುದಾಯ ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಸಂಕೀರ್ತನಾ ಯಾತ್ರೆಯು ಎಚ್ಚರಿಕೆಯ ಸಂಕೇತವಾಗಿದೆ ಎಂದೆನಿಸುತ್ತಿದೆ ಎಂದು ತಿಳಿಸಿದ್ದಾರೆ.