ಬೆಂಗಳೂರು: ಇಂಡಿಗೋ ವಿಮಾನ ಹಾರಾಟ ರದ್ದಾಗಿರುವ ಪರಿಣಾಮವಾಗಿ ಖಾಸಗಿ ಬಸ್ ಟಿಕೆದ್ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಸ್ಥಿತಿ ಲಾಭ ಪಡೆಯಲು ಖಾಸಗಿ ಸಂಸ್ಥೆಗಳು ಯತ್ನ ನಡೆಸುತ್ತಿದ್ದು. ಬೆಂಗಳೂರು-ಮುಂಬೈ ಪ್ರಯಾಣಕ್ಕಾಗಿ ಜನರಿಂದ ದುಪ್ಪಟ್ಟು-ಮೂರುಪಟ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದೆ.
ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರ 1200 ರೂ.ನಿಂದ 1400 ರೂ. ವರೆಗೆ ಇತ್ತು. ಆದರೆ, ಇಂಡಿಗೋ ವಿಮಾನ ಬಿಕ್ಕಟ್ಟು ಎದುರಾದ ಬಳಿಕ ಅದೇ ಮಾರ್ಗದ ಬಸ್‌ಗಳಲ್ಲಿ ಈಗ ಆರಂಭದ ದರವೇ 3200 ರೂ, 3800 ರೂ, 4999 ರೂ, 6500 ರೂ. ಆಗಿದೆ. ಕೆಲ ಬಸ್‌ಗಳಲ್ಲಿ ಗರಿಷ್ಠ ದರ ರೂ.9,000 ತಲುಪಿದೆ.
ಕರ್ನಾಟಕ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ವಿಮಾನ ರದ್ದತಿಯ ನಂತರ ಬಸ್ ದರಗಳು ತೀವ್ರವಾಗಿ ಏರಿಕೆಯಾಗಿವೆ, ನಿರ್ವಾಹಕರು ಸಾಮಾನ್ಯ ದರಕ್ಕಿಂತ ನಾಲ್ಕರಿಂದ ಎಂಟು ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಖಾಸಗಿ ಸಂಸ್ಥೆಗಳ ವರ್ತನಯನ್ನು ಖಂಡಿಸಿದ್ದಾರೆ.
ಶುಕ್ರವಾರ, ಕೆಲವು ಹೊರ ರಾಜ್ಯ ನಿರ್ವಾಹಕರು ಬೆಂಗಳೂರಿನಿಂದ ಮುಂಬೈಗೆ ಟಿಕೆಟ್‌ಗೆ 13,000 ರೂ. ವರೆಗೆ ಶುಲ್ಕ ವಿಧಿಸಿದ್ದು, ಇದರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಶೋಭಿತ್ ಸೌರಭ್ ಎಂಬುವವರು ಮಾತನಾಡಿ, ನಾನು 5,000 ರೂ.ಗೆ ಇಂಡಿಗೋ ವಿಮಾನವನ್ನು ಬುಕ್ ಮಾಡಿದ್ದೆ. ಆದರೆ, ಟಿಕೆಟ್ ನ್ನು ರದ್ದುಗೊಳಿಸಲಾಯಿತು, ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿ ಮರುಪಾವತಿಸುವ ಭರವಸೆ ನೀಡಿದೆ. ಇದೀಗ ಪುಣೆಯಿಂದ ಬೆಂಗಳೂರಿಗೆ ಪ್ರಯಾಣಿಸಲು 8,000 ರೂ.ಗೆ ಬಸ್ ಟಿಕೆಟ್ ಬುಕ್ ಮಾಡಿದ್ದೇನೆ, ಅದು ನನ್ನ ವಿಮಾನ ದರಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.