ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ಈಗಾಗಲೇ ಚಳಿಯ ತೀವ್ರತೆಗೆ ಹೈರಾಣಾಗಿದ್ದು, ಇದೀಗ ಹವಾಮಾನ ಇಲಾಖೆ ನಗರದಲ್ಲಿ ಚಳಿ ತೀವ್ರಗೊಳ್ಳುವ ಮಾಹಿತಿ ನೀಡಿದೆ.
ಹೌದು.. ಬೆಂಗಳೂರಿನ ತಾಪಮಾನ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಇದು ತಾಪಮಾನ ಮತ್ತಷ್ಟು ಕುಸಿಯಲು ಕಾರಣ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 15 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಸಂಜೆ 5:53 ಕ್ಕೆ ಸೂರ್ಯಾಸ್ತವಾಗುವ ನಿರೀಕ್ಷೆಯಿದೆ. ಆರ್ದ್ರತೆಯು ಸುಮಾರು 49 ಪ್ರತಿಶತದಷ್ಟು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದೆ ಇತರೆಡೆ ಒಣಹವೆ
ಇನ್ನು ಹವಾಮಾನ ಇಲಾಖೆ ಮೂಲವನ್ನು ಉಲ್ಲೇಖಿಸಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) X ನಲ್ಲಿನ ಹವಾಮಾನ ವರದಿಯನ್ನು ಹಂಚಿಕೊಂಡಿದ್ದು, "ರಾಜ್ಯದಾದ್ಯಂತ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ, ಬೆಳಿಗ್ಗೆ ಶೀತ ಮತ್ತು ಮಂಜಿನ ಪರಿಸ್ಥಿತಿಗಳು ಸಾಧ್ಯ" ಎಂದು ಹೇಳಿದೆ.
ಬೆಂಗಳೂರು ಗಾಳಿ ಗುಣಮಟ್ಟ
ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಸುಮಾರು 190 ತಲುಪುವ ನಿರೀಕ್ಷೆಯಿದೆ, ಇದು ಮಧ್ಯಮ ವ್ಯಾಪ್ತಿಯಲ್ಲಿ ಬರುತ್ತದೆ. 90 ರಿಂದ 200 ರ ನಡುವಿನ AQI ಅನ್ನು ಮಧ್ಯಮ ಎಂದು ವರ್ಗೀಕರಿಸಲಾಗಿದೆ.
ಮುಂದಿನ ಮೂರು ದಿನ ತಾಪಮಾನ ಕುಸಿತ
ಹವಾಮಾನ ಇಲಾಖೆ ಮಾಹಿತಿ ನೀಡಿರುವಂತೆ ಮುಂದಿನ ಮೂರು ದಿನಗಳ ತಾಪಮಾನದಲ್ಲಿ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಡಿಸೆಂಬರ್ 9 ರಂದು ಕನಿಷ್ಠ ಮತ್ತು ಗರಿಷ್ಠ ತಾಪಮಾನಗಳು ಕ್ರಮವಾಗಿ 15 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್. ಆರ್ದ್ರತೆಯು ಸುಮಾರು 50 ಪ್ರತಿಶತದಷ್ಟಿರುತ್ತದೆ.
ಅಂತೆಯೇ ಡಿಸೆಂಬರ್ 10, ಬುಧವಾರ, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 14 ಡಿಗ್ರಿ ಸೆಲ್ಸಿಯಸ್ ಮತ್ತು 27 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ಅಂದು ಮೋಡ ಕವಿದ ವಾತಾವರಣ ಅನುಭವಿಸುವ ನಿರೀಕ್ಷೆಯಿದೆ ಮತ್ತು ದಿನವಿಡೀ ಅದು ಒಂದೇ ಆಗಿರುತ್ತದೆ ಎಂದು ಹೇಳಿದೆ.
ಅಂತೆಯೇ ಡಿಸೆಂಬರ್ 11ರಂದು ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ನಿವಾಸಿಗಳು ತಂಪಾದ ವಾತಾವರಣವನ್ನು ಅನುಭವಿಸುತ್ತಾರೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಕ್ರಮವಾಗಿ 13 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.