ಮೈಸೂರು: ದರೋಡೆಗಾಗಿ ದುಷ್ಕರ್ಮಿಗಳು ಅಪಹರಿಸಿದ ಉದ್ಯಮಿಯೊಬ್ಬರನ್ನು ರಕ್ಷಿಸಿದ್ದು, ಈ ಸಂಬಂಧ ಐವರನ್ನು ಬಂಧಿಸಿರುವುದಾಗಿ ಮೈಸೂರು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ನಲ್ಲಿ ತೊಡಗಿದ್ದ ವಿಜಯನಗರದ ನಿವಾಸಿ ಲೋಕೇಶ್ ಅವರನ್ನು ಡಿ. 6ರಂದು ಅಪಹರಿಸಲಾಗಿತ್ತು. ಪ್ರಮುಖ ಆರೋಪಿ ಸಂತೋಷ್ ಗೆ ಕಳೆದ ಮೂರು ತಿಂಗಳಿನಿಂದ ಲೋಕೇಶ್ ಗೊತಿತ್ತು. ಅವರ ಬಳಿ ಅಪಾರ ಪ್ರಮಾಣದ ಆಸ್ತಿ ಇದೆ ಅಂದುಕೊಂಡಿದ್ದ ಎನ್ನಲಾಗಿದೆ.
ಈ ಊಹೆಯ ಮೇರೆಗೆ ಅವರು ಕಿಡ್ನಾಪ್ ಯೋಜಿಸಿದ್ದರು ಎಂದು ಆರೋಪಿಸಲಾಗಿದೆ. ಲೋಕೇಶ್ ಪ್ರತಿದಿನ ಕ್ಲಬ್ ಗೆ ಭೇಟಿ ನೀಡುತ್ತಿದದ್ದು ಸಂತೋಷ್ ಗೆ ಗೊತಿತ್ತು. ಇದನ್ನು ಆತ ಅನುಕೂಲವಾಗಿ ಪಡೆದುಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಣ್ಣಿಗೆ ಖಾರದ ಪುಡಿ ಎರಚಿ ಕಿಡ್ನಾಪ್: ಬಾಡಿಗೆಗೆ ಪಡೆದಿದ್ದ ಟಾಟಾ ಸುಮೋದಲ್ಲಿ ಬಲವಂತವಾಗಿ ಕಿಡ್ನಾಪ್ ಮಾಡುವ ಮುನ್ನ ಲೋಕೇಶ್ ಕಣ್ಣಿಗೆ ಮೆಣಸಿನ ಪುಡಿ ಎರಚಲಾಗಿದೆ. ಬಳಿಕ ಲೋಕೇಶ್ ಅವರ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಸುಮಾರು 20 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಲೋಕೇಶ್ ಫೋನ್ ಸ್ವಿಚ್ ಆಫ್ ಆಗಿದ್ದು ರಾತ್ರಿ 8.30 ಗಂಟೆಯಾದರೂ ಮನೆಗೆ ಬಾರದೆ ಇದ್ದಾಗ ಅವರ ಪತ್ನಿಗೆ ಅನುಮಾನ ಬಂದಿದೆ.
ಆಕೆಯ ದೂರಿನ ಆಧಾರದ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕೇಶ್ ಗೆ ಗೊತ್ತಿರುವವರೇ ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತು. ಬಳಿಕ ಅಪರಾಧ ಸ್ಥಳಕ್ಕೆ ಹೋದಾಗ ಮೆಣಸಿನ ಪುಡಿ ಮತ್ತು ಬುಲೆಟ್ ಬೈಕು ಸಿಕ್ಕಿತು. ಹೀಗಾಗಿ ಲೋಕೇಶ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂಬ ತೀರ್ಮಾನಕ್ಕೆ ಬಂದೇವು ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
15ರಿಂದ 20 ಲಕ್ಷ ಹಣಕ್ಕೆ ಬೇಡಿಕೆ: ಸ್ವಲ್ಪ ಸಮಯದ ನಂತರ ಸಂತ್ರಸ್ತನ ಹೆಂಡತಿ ಲೋಕೇಶ್ ಅವರಿಂದ ವಾಯ್ಸ್ ಮೇಸೆಜ್ ಬಂದಿದ್ದು, ರಾತ್ರಿ 11.30 ರೊಳಗೆ ಮನೆಗೆ ವಾಪಸ್ ಆಗುತ್ತಿದ್ದು, ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ. ನಂತರ ಲೋಕೇಶ್ ಸ್ನೇಹಿತನಿಗೆ ಅಪಹರಣಕಾರರಿಂದ 15-20 ಲಕ್ಷ ರೂ.ಗೆ ಬೇಡಿಕೆ ಬಂದಿತ್ತು.
ಪೊಲೀಸರ ಕಾರ್ಯಾಚರಣೆ ಹೇಗಿತ್ತು?
ಆರೋಪಿ ಕರೆ ಸಂಖ್ಯೆ ಗುರುತಿಸಿ ಹಂಪಾಪುರದ ಸ್ಥಳವನ್ನು ಪತ್ತೆಹಚ್ಚಿದ್ದೇವು. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ, ಆರೋಪಿಗಳು ಟಾಟಾ ಸುಮೋವನ್ನು ಬಾಡಿಗೆಗೆ ತೆಗೆದುಕೊಂಡು ಲೋಕೇಶ್ ಅವರನ್ನು ಕರೆದೊಯ್ದಿದ್ದಾರೆ ಎಂಬುದು ತಿಳಿಯಿತು. ಬಳಿಕ ಪೊಲೀಸರು ಐದು ತಂಡಗಳನ್ನು ರಚಿಸಿ, ಹಣ ನೀಡುವುದಾಗಿ ಅಪಹರಣಕಾರರಿಗೆ ಮನವರಿಕೆ ಮಾಡಿಕೊಟ್ಟು ಬಲೆ ಬೀಸಿ ಕೆಆರ್ ನಗರದಿಂದ ಶಂಕಿತರನ್ನು ಹಿಡಿದು ಲೋಕೇಶ್ ನನ್ನು ರಕ್ಷಿಸಿದ್ದಾರೆ.