ಬೆಳಗಾವಿ: ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣದ ಸಂಬಂಧ ಇರುವ ತೊಡಕುಗಳ ನಿವಾರಣೆಗೆ ಸದನ ಸಮಿತಿ ರಚಿಸಲು ನಿರ್ಧರಿಸಿರುವುದಾಗಿ ರಾಜ್ಯ ಸರ್ಕಾರ ಸೋಮವಾರ ಹೇಳಿದೆ.
ವಿಧಾನಪರಿಷತ್ತಿನಲ್ಲಿ ಹಲವು ಸದಸ್ಯರ ಮನವಿಗೆ ಸ್ಪಂದಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರ ಸದನ ಸಮಿತಿ ರಚಿಸಲು ನಿರ್ಧರಿಸಿದೆ. ಮಾನ್ಯತೆ ನವೀಕರಣದ ನಿಯಮಗಳ ಸಡಿಲಿಕೆ ಕುರಿತು ಸದನ ಸಮಿತಿ ನೀಡುವ ವರದಿ ಆಧರಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ಕಾರವು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸದನ ಸಮಿತಿ ರಚಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪರಿಷತ್ತಿನ ಸದಸ್ಯರು ಪ್ರಸ್ತಾಪಿಸಿದಂತೆ, ಸದನ ಸಮಿತಿ ರಚಿಸಿ ಅನುಷ್ಠಾನಗೊಳಿಸುವವರೆಗೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಕೂಡಲೇ ಸದನ ಸಮಿತಿ ರಚಿಸಿ, ಸಮಿತಿಯಿಂದ ಅಭಿಪ್ರಾಯ ಪಡೆದು ಅನುಷ್ಠಾನ ಮಾಡುವುದಾಗಿ ಸಚಿವರು ಹೇಳಿದರು.
ಶಾಲೆಗಳ ಮಾನ್ಯತೆ ನವೀಕರಣ ಆದೇಶದ ಮೇಲೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಮತ್ತಿತರರು ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಡೆಸಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಅದಾಗ್ಯೂ ಈ ಆದೇಶದ ಮೇಲೆ ಯಾರಾದರೂ ಹಣ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಿ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುತ್ತೇವೆ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.
ಮಾನ್ಯತೆ ನವೀಕರಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಈಗ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಬೇಕು. ಕೂಡಲೇ ಸದನ ಸಮಿತಿ ರಚಿಸಿ ಪರಿಹಾರ ಕಲ್ಪಿಸಬೇಕು ಎಂದು ಪರಿಷತ್ ಸದಸ್ಯರಾದ ಪುಟ್ಟಣ್ಣ, ಶಶೀಲ್ ಜಿ. ನಮೋಶಿ, ಎಸ್.ವಿ. ಸಂಕನೂರ ಮತ್ತು ಎಸ್. ಎಲ್. ಭೋಜೇಗೌಡ ಮತ್ತಿತರರು ಸರ್ಕಾರವನ್ನು ಒತ್ತಾಯಿಸಿದರು.