ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯ ವಿಧಾನಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಶುಕ್ರವಾರ ಆರೋಪಿಸಿದ್ದು, ವಿಧಾನಮಂಡಲದ ಅಧಿವೇಶನ ಮುಗಿಯುವವರೆಗೂ ಆಡಳಿತಾರೂಢ ಕಾಂಗ್ರೆಸ್‌ನ 'ಡಿನ್ನರ್ ಪಾಲಿಟಿಕ್ಸ್'ಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ. ಇಂತಹ 'ಡಿನ್ನರ್ ರಾಜಕೀಯ' ಸಚಿವರ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಕೇಳಿಬರುವ ಸಮಸ್ಯೆಗಳು ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಸಮರ್ಥರಿದ್ದು, ಸಜ್ಜಾಗಿ ಬರುತ್ತಾರೆ ಎಂದು ನಂಬಿದ್ದೇವೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗದಿರುವ ಬಗ್ಗೆ ಮಹೇಶ್ ಟೆಂಗಿನಕಾಯಿ ಕೇಳಿದಾಗ, ಆಗಸ್ಟ್ ವರೆಗೆ ಹಣ ಮಂಜೂರಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಎರಡು ತಿಂಗಳಿಂದ ಇನ್ನೂ ಹಣ ಜಮಾ ಆಗಿಲ್ಲ ಎಂದು ಶಾಸಕರು ಗಮನಕ್ಕೆ ತರಲು ಮುಂದಾದಾಗ, ನಾನು ಎಲ್ಲಾವನ್ನು ಹೇಳಿದ್ದೇನೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯವಾಗಿ ಉತ್ಪಾದನೆಯಾಗುವ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಯೂನಿಟಿ ಮಾಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದ್ದು, ಕೋರ್ಟ್ನಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಡೆಯಾಜ್ಞೆ ತಂದಿದ್ದಾರೆ. ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಯೂನಿಟಿ ಮಾಲ್ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ. ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಇದೇ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದಿದ್ದಾರೆ. ಕರ್ನಾಟಕ ಸರ್ಕಾರ ಮಾಲ್ ಸ್ಥಾಪಿಸಲಿ ಅದಕ್ಕೆ ನನ್ನ ವಿರೋಧ ಇಲ್ಲ. ಆದರೆ ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಹಂಚಿಕೆ ಮಾಡಲಿ. ನಿರ್ದಿಷ್ಟ ಖಾಸಗಿ ಆಸ್ತಿಯನ್ನು ಹಂಚಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್ಎಂ ರೇವಣ್ಣ ಅವರ ಪುತ್ರ ಆರ್.ಶಶಾಂಕ್ ಪ್ರಯಾಣಿಸತ್ತಿದ್ದ ಕಾರು ಗುರುವಾರ ತಡ ರಾತ್ರಿ ಬೈಕಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕು ಗುಡೇಮಾರನಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಘಟನೆ ವೇಳೆ ರೇವಣ್ಣ ಪುತ್ರ ಶಶಾಂಕ್ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ನಿರಾಕರಿಸಿದ ರೇವಣ್ಣ, ಅವರ ಡ್ರೈವರ್ ಕಾರು ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ. ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್(27) ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಕಾರು ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕಾರು ಆರ್.ಶಶಾಂಕ್ ಅವರ ಹೆಸರಿನಲ್ಲಿರುವುದು ದೃಢಪಟ್ಟಿದೆ.
ರಾಜ್ಯಾದ್ಯಂತ ಡ್ರಗ್ಸ್ ಮಾರಾಟವನ್ನು ತಡೆಯುವ ವಿಶಾಲ ಕಾರ್ಯತಂತ್ರದ ಭಾಗವಾಗಿ ಮಾದಕ ದ್ರವ್ಯ ವ್ಯಾಪಾರದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳು ವಾಸಿಸುವ ಮನೆಗಳನ್ನು ಕೆಡವುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸದನದಲ್ಲಿ ಹೇಳಿದ್ದಾರೆ. ಆಫ್ರಿಕನ್ ದೇಶಗಳಿಂದ ಅನೇಕ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ಮಾದಕ ದ್ರವ್ಯ ವ್ಯವಹಾರದಲ್ಲಿದ್ದಾರೆ. ಅಗತ್ಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಸುಮಾರು 300 ಜನರನ್ನು ಗಡೀಪಾರು ಮಾಡಲಾಗಿದೆ "ನಾವು ಅವರು ವಾಸಿಸುವ ಬಾಡಿಗೆ ಕಟ್ಟಡವನ್ನು ಸಹ ಕೆಡವುವ ಹಂತಕ್ಕೆ ಹೋಗಿದ್ದೇವೆ" ಎಂದು ಜಿ ಪರಮೇಶ್ವರ ಅವರು ಹೇಳಿದ್ದಾರೆ.
ಹೈ-ಟೆನ್ಷನ್ ವೈರ್ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ ಮೌಲ್ಯದ ವಿಶೇಷ ತಳಿಯ ಮಕಾವ್ ಗಿಳಿಯನ್ನು ರಕ್ಷಿಸುವ ಪ್ರಯತ್ನದಲ್ಲಿ, ಆಕಸ್ಮಿಕವಾಗಿ ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವೈರ್ ನ್ನು ಸ್ಪರ್ಶಿಸಿದ 32 ವರ್ಷದ ವ್ಯಕ್ತಿಯೊಬ್ಬ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಭದ್ರ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.